Lok Sabha Election 2024, Opinion Poll: ಉತ್ತರ ಪ್ರದೇಶದಲ್ಲಿ ಹೀಗಿದೆ ಯೋಗಿ - ಮೋದಿ ದರ್ಬಾರ್?
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಸೆಮಿಫೈನಲ್ ಎಂದೇ ಕರೆಯಲ್ಪಡುವ ಈ ವಿಧಾನಸಭಾ ಚುನಾವಣಾ ಪೂರ್ವ ತಯಾರಿಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ನಿರತವಾಗಿವೆ.
ಸಾರ್ವತ್ರಿಕ ಚುನಾವಣೆಗೆ ಬಹುತೇಕ 8-9 ತಿಂಗಳಿವೆ, ಈಗ ಒಂದು ವೇಳೆ ಚುನಾವಣೆ ನಡೆದರೆ ಮತದಾರನ ನಾಡಿಮಿಡಿತ ಯಾವ ಪಕ್ಷ ಅಥವಾ ಒಕ್ಕೂಟದ ಮೇಲಿದೆ ಎನ್ನುವ ಒಪಿನಿಯನ್ ಪೋಲ್ ಅನ್ನು ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸುತ್ತಿವೆ.

ಇಂಡಿಯಾ ಟಿವಿ ಜಂಟಿಯಾಗಿ ನಡೆಸಿದ ಸಮೀಕ್ಷೆಯೊಂದು ಹೊರಬಿದ್ದಿದೆ. ಇದು ಸಿಎನ್ಎಕ್ಸ್ ಸಂಸ್ಥೆಯೊಂದಿಗೆ ನಡೆಸಿದ ಸಮೀಕ್ಷೆ, ಅದರ ಪ್ರಕಾರ ಉತ್ತರ ಪ್ರದೇಶದಲ್ಲಿ ಯಾರ ಪರ ಗಾಳಿ ಬೀಸುತ್ತಿದೆ ಎನ್ನುವುದರ ಬಗ್ಗೆ ತನ್ನ ವರದಿಯಲ್ಲಿ ಹೇಳಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಉತ್ತರ ಪ್ರದೇಶದ ಫಲಿತಾಂಶ ಯಾವುದೇ ಪಕ್ಷಕ್ಕೆ ನಿರ್ಣಾಯಕ, ಯಾಕೆಂದರೆ ಅಲ್ಲಿರುವ ಲೋಕಸಭಾ ಸೀಟುಗಳ ಸಂಖ್ಯೆ. ಬರೋಬ್ಬರಿ ಎಂಬತ್ತು ಸೀಟನ್ನು ಹೊಂದಿರುವ ಅಲ್ಲಿ, ಸತತವಾಗಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.
ಕಳೆದ ಬಾರಿಯ ಅಂದರೆ 2019ರ ಚುನಾವಣೆಯಲ್ಲಿ ಯೋಗಿ - ಮೋದಿ ಅಬ್ಬರಕ್ಕೆ ವಿರೋಧ ಪಕ್ಷಗಳು ಧೂಳೀಪಟವಾಗಿದ್ದವು. ಖುದ್ದು, ರಾಹುಲ್ ಗಾಂಧಿಯವರೇ ತಮ್ಮ ಕರ್ಮಭೂಮಿ ಅಮೇಠಿಯಲ್ಲಿ ಸೋಲುಂಡಿದ್ದರು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 64 ಸ್ಥಾನವನ್ನು ಗೆದ್ದಿತ್ತು.
ಇಂಡಿಯಾ ಟಿವಿಯ ತಾಜಾ ಸಮೀಕ್ಷೆ
ಇನ್ನು ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷ ಹೊಂದಾಣಿಕೆಯಿಂದ ಕಣದಲ್ಲಿತ್ತು, ಆ ಘಟಬಂಧನ್ ಹದಿನೈದು ಸ್ಥಾನವನ್ನು ಗೆದಿದ್ದರೆ, ಸೋನಿಯಾ ಗಾಂಧಿ ಮಾತ್ರ ರಾಯ್ ಬರೇಲಿಯಿಂದ ಗೆದ್ದಿದ್ದರು. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಶಕ್ತವಾಗಿತ್ತು.
ಇಂಡಿಯಾ ಟಿವಿಯ ತಾಜಾ ಸಮೀಕ್ಷೆ ಪ್ರಕಾರ, ಬಿಜೆಪಿಯ ಸಾಧನೆ ಕಳೆದ ಬಾರಿಗಿಂತ ಚೆನ್ನಾಗಿರಲಿದೆ. ಇನ್ನೂ ಹೆಚ್ಚಿನ ಸ್ಥಾನವನ್ನು ಉತ್ತರ ಪ್ರದೇಶದಿಂದ ಗೆಲ್ಲಿಸಿ ಕೊಡುವ ಮೂಲಕ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಕ್ಷಕ್ಕೆ ಭರ್ಜರಿ ಕೊಡುಗೆಯನ್ನು ನೀಡಲಿದ್ದಾರೆ.
ಯಾರಿಗೆ ಎಷ್ಟು ಸೀಟು ಸಿಗುವ ಸಾಧ್ಯತೆಯಿದೆ
ಸಮೀಕ್ಷೆಯ ಪ್ರಕಾರ, ಬಿಜೆಪಿ ಮೈತ್ರಿಕೂಟಕ್ಕೆ 70 ಸ್ಥಾನ ಲಭಿಸಲಿದೆ ಅಂದರೆ ಕಳೆದ ಬಾರಿಗಿಂತ ಆರು ಸ್ಥಾನ ಹೆಚ್ಚು. ಇನ್ನು ಸಮಾಜವಾದಿ ಪಕ್ಷಕ್ಕೆ ನಾಲ್ಕು, ಕಾಂಗ್ರೆಸ್ಸಿಗೆ ಎರಡು, ಬಿಎಸ್ಪಿಗೆ ಒಂದು, ಅಪ್ನಾದಳಕ್ಕೆ ಎರಡು ಮತು ಇತರರಿಗೆ ಎರಡು ಸ್ಥಾನ ಲಭಿಸುವ ಸಾಧ್ಯತೆಯಿದೆ.
ಶೇಕಡಾವಾರು ಮತ ಪ್ರಮಾಣ ಹೀಗಿದೆ:
ಬಿಜೆಪಿ : ಶೇ. 52
ಎಸ್ಪಿ : ಶೇ. 23
ಬಿಎಸ್ಪಿ: ಶೇ. 12
ಕಾಂಗ್ರೆಸ್ : ಶೇ. 4
ಇತರರು: ಶೇ. 9












Click it and Unblock the Notifications