ಶ್ರೀಲಂಕಾ ಜತೆಗಿನ ಬುದ್ಧಿಸ್ಟ್ ಒಪ್ಪಂದಕ್ಕೆ ಭಾರತದಿಂದ 15 ಮಿಲಿಯನ್ ಡಾಲರ್ ನೆರವು
ನವದೆಹಲಿ, ಸೆಪ್ಟೆಂಬರ್ 26: ನೆರೆಹೊರೆಯವರು ಮೊದಲು ಎಂಬ ನೀತಿಯಡಿ ಭಾರತವು ಶ್ರೀಲಂಕಾಕ್ಕೆ ಯಾವಾಗಲೂ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಜತೆ ಆನ್‌ಲೈನ್ ದ್ವಿಪಕ್ಷೀಯ ಮಾತುಕತೆ ನಡೆಸಿದ ಅವರು, ಪ್ರದೇಶದಲ್ಲಿನ ಎಲ್ಲರ ಭದ್ರತೆ ಮತ್ತು ಬೆಳವಣಿಗೆ (ಸಾಗರ್) ನೀತಿಯಲ್ಲಿ ಕೂಡ ಶ್ರೀಲಂಕಾಕ್ಕೆ ಮಹತ್ವ ನೀಡುತ್ತಿದ್ದೇವೆ. ಭಾರತ ಮತ್ತು ಶ್ರೀಲಂಕಾ ಸಂಬಂಧ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ಮೋದಿ ತಿಳಿಸಿದರು.
ಆನ್‌ಲೈನ್ ದ್ವಿಪಕ್ಷೀಯ ಸಮ್ಮೇಳನಕ್ಕೆ ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ರಾಜಪಕ್ಸ ಅವರಿಗೆ ಧನ್ಯವಾದ ಸಲ್ಲಿಸಿದ ಮೋದಿ, ಇತ್ತೀಚೆಗಷ್ಟೇ ಪ್ರಧಾನಿಯಾಗಿ ಆಯ್ಕೆಯಾದ ಅವರನ್ನು ಹಾಗೂ ಅವರ ಪಕ್ಷವನ್ನು ಅಭಿನಂದಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಬುದ್ಧಿಸ್ಟ್ ಒಪ್ಪಂದವನ್ನು ಉತ್ತೇಜಿಸಲು 15 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದರು. ಉತ್ತರ ಪ್ರದೇಶದ ಕುಶಿನಗರಕ್ಕೆ ಮೊದಲ ಉದ್ಘಾಟನಾ ವಿಮಾನದಲ್ಲಿ ಬರಲಿರುವ ಶ್ರೀಲಂಕಾದ ಬೌದ್ಧ ಯಾತ್ರಾರ್ಥಿಗಳ ನಿಯೋಗಕ್ಕೆ ಭಾರತ ಸತ್ಕಾರ ನೀಡಲಿದೆ.
ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಇತರೆ ದೇಶಗಳ ಜತೆ ಸೇರಿ ಭಾರತ ಕಾರ್ಯನಿರ್ವಹಿಸಿದ ಬಗೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಮಹಿಂದಾ ರಾಜಪಕ್ಸ, ಎಂಟಿ ನ್ಯೂ ಡೈಮಂಡ್ ಹಡಗಿಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸುವ ವೇಳೆ ನಡೆದ ಕಾರ್ಯಾಚರಣೆಯು ಎರಡೂ ದೇಶಗಳ ನಡುವಿನ ಸಹಕಾರವನ್ನು ದೊಡ್ಡಮಟ್ಟಕ್ಕೆ ಬಲಪಡಿಸಲು ಅವಕಾಶ ನೀಡಿದೆ ಎಂದು ಹೇಳಿದರು.
ಇದು ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ದೇಶವೊಂದರ ಜತೆ ನಡೆಸಿದ ಮೊದಲ ಆನ್‌ಲೈನ್ ಮಾತುಕತೆಯಾಗಿದೆ. ಆಗಸ್ಟ್‌ನಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ರಾಜಪಕ್ಸ ವಿದೇಶವೊಂದರ ಜತೆ ನಡೆಸಿದ ಪ್ರಥಮ ರಾಜತಾಂತ್ರಿಕ ಸಭೆ ಇದಾಗಿದೆ.












Click it and Unblock the Notifications