Covid cases in India : ಕೋವಿಡ್ ಕಾಟ: ಭಾರತದಲ್ಲಿ ಶೇ.90ರಷ್ಟು ಕೊರೊನಾವೈರಸ್ ಪ್ರಕರಣಗಳ ಏರಿಕೆ!
ನವದೆಹಲಿ, ಏಪ್ರಿಲ್ 18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಭಾರತ ಬಚಾವ್ ಆಯ್ತು ಎನ್ನುವಷ್ಟರಲ್ಲೇ ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯು ಶೇ.89.80ರಷ್ಟು ಏರಿಕೆಯಾಗಿದೆ.
ದೇಶದಲ್ಲಿ ಒಂದು ದಿನದಲ್ಲಿ 2183 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಭಾನುವಾರವೊಂದೇ ದಿನದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯು ಶನಿವಾರಕ್ಕೆ ಹೋಲಿಸಿದರೆ ಶೇ.89.80ರಷ್ಟು ಹೆಚ್ಚಳವಾಗಿದೆ. ಶನಿವಾರದಂದು ದೇಶದಲ್ಲಿ 1150 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.
ಕಳೆದ ಒಂದು ದಿನದಲ್ಲಿ ಕೋವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ಕೇರಳವೊಂದರಲ್ಲೇ ಒಂದು ದಿನದಲ್ಲಿ ಕೊರೊನಾವೈರಸ್ ಸೋಂಕಿನಿಂದ 212 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಭಾನುವಾರವೊಂದೇ ದಿನದಲ್ಲಿ 214 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕಿನಿಂದ ಸತ್ತವರ ಸಂಖ್ಯೆ ಹೆಚ್ಚಳ
ಕಳೆದ 24 ಗಂಟೆಗಳಲ್ಲಿ ಒಟ್ಟು 214 ಸಾವಿನ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಕೇರಳದ 212 ಸಾವುಗಳ ಬ್ಯಾಕ್‌ಲಾಗ್ ಇದ್ದು, ನ್ಯಾಯಾಲಯದ ಮೇಲ್ಮನವಿಗಳ ನಂತರ 62 ಸಾವುಗಳ ಬಾಕಿ ಪ್ರಕರಣಗಳನ್ನು ತೆರವುಗೊಳಿಸಲಾಗಿದೆ. ಏಪ್ರಿಲ್ 13 ಮತ್ತು ಏಪ್ರಿಲ್ 16ರ ನಡುವೆ 150 ಸಾವಿನ ಪ್ರಕಣಗಳು ದಾಖಲಾಗಿವೆ. ಒಂದು ದಿನದಲ್ಲಿ ಮೃತಪಟ್ಟವರ ಸಂಖ್ಯೆ 214ಕ್ಕೆ ಹೆಚ್ಚಿದ್ದು, ಸಾವಿನ ಸಂಖ್ಯೆಗಳು ಕೇರಳದಿಂದ 62 ಬ್ಯಾಕ್‌ಲಾಗ್‌ಗಳನ್ನು ಒಳಗೊಂಡಿದ್ದರೂ, ನಿನ್ನೆಯ ಬುಲೆಟಿನ್‌ನಲ್ಲಿ ಕೇವಲ ನಾಲ್ಕು ಸಾವಿನ ಪ್ರಕರಣಗಳು ವರದಿಯಾಗಿದ್ದವು.

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಏರಿಳಿತ ಹೇಗಿದೆ?
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2183 ಕೋವಿಡ್-19 ಸೋಂಕಿತ ಪ್ರಕರಣಗಳನ್ನು ವರದಿ ಮಾಡಿದೆ. ಆ ಮೂಲಕ ಶೇ.89.80ರಷ್ಟು ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಕೊರೊನಾವೈರಸ್ ಪಾಸಿಟಿವಿಟಿ ದರ ಶನಿವಾರ ಶೇ.0.31ರಷ್ಟಿದ್ದರೆ, ಭಾನುವಾರ ಶೇ.0.83ರಷ್ಟಾಗಿದೆ. ಕಳೆದ ಏಳು ದಿನಗಳಲ್ಲಿ ಎಷ್ಟು ಜನರಿಗೆ ಕೋವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಈ ಪೈಕಿ ಎಷ್ಟು ಜನರಿಗೆ ಸೋಂಕು ಪಕ್ಕಾ ಆಗಿದೆ ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.
| ದಿನಾಂಕ | ಹೊಸ ಪ್ರಕರಣಗಳು | ಎಷ್ಟು ಜನರಿಗೆ ಪರೀಕ್ಷೆ |
| 18 ಏಪ್ರಿಲ್ | 2,183 | 2,61,440 |
| 17 ಏಪ್ರಿಲ್ | 1,150 | 3,65,118 |
| 16 ಏಪ್ರಿಲ್ | 975 | 3,00,918 |
| 15 ಏಪ್ರಿಲ್ | 949 | 3,67,213 |
| 14 ಏಪ್ರಿಲ್ | 1,007 | 4,34,877 |
| 13 ಏಪ್ರಿಲ್ | 1,088 | 4,29,323 |
| 12 ಏಪ್ರಿಲ್ | 796 | 4,06,251 |

ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕ್ರಮೇಣ ಏರಿಕೆಯಾದಂತೆ ಗೋಚರಿಸುತ್ತಿದೆ. ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆ ಆಗುತ್ತಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,044,280ಕ್ಕೆ ಏರಿಕೆಯಾಗಿದ್ದು, ಈ ಪೈಕಿ 42,510,773 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ 521,965 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು 11,542 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಎಷ್ಟಿದೆ?
ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಿಸುವ ಸಲುವಾಗಿ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಇದುವರೆಗೂ 1,86,54,94,355 ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಮೊದಲ ಹಂತ, ಎರಡನೇ ಹಂತ ಮತ್ತು ಮೂರನೇ ಹಂತ ಎಂಬುದಾಗಿ ಹಂತ-ಹಂತವಾಗಿ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಲಾಗಿತ್ತು. ಇದೇ ಏಪ್ರಿಲ್ 10ರಿಂದ ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕಯನ್ನೂ ಸಹ ವಿತರಿಸಲು ಆರಂಭಿಸಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಪಡೆದು 9 ತಿಂಗಳ ನಂತರದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಇದುವರೆಗೂ 2,53,26,640 ಮಂದಿಗೆ ಬೂಸ್ಟರ್ ಡೋಸ್ ವಿತರಣೆ ಮಾಡಲಾಗಿದೆ. ಆದರೆ ಏಪ್ರಿಲ್ 10ರಂದು ಘೋಷಿಸಿದಂತೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು 2ನೇ ಡೋಸ್ ಪಡೆದು 9 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು. ಆದರೆ ಅದಕ್ಕೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ.












Click it and Unblock the Notifications