Savitri Jindal: ಹರಿಯಾಣ ಚುನಾವಣೆಯಲ್ಲಿ ದೇಶದ ಶ್ರೀಮಂತ ಮಹಿಳೆ ಪಕ್ಷೇತರ ಸ್ಪರ್ಧೆ
ಹಿಸಾರ್, ಸೆಪ್ಟಂಬರ್ 13: ಹರಿಯಾಣದಲ್ಲಿ ವಿಧಾನಸಭಾ ಕ್ಷೇತ್ರದ ಬಿರುಸು ಪ್ರಚಾರ ಆರಂಭವಾಗಿದೆ. ರಾಜಕೀಯ ಪಕ್ಷಗಳು ಒಂದೊಂದಾಗಿ ಟಿಕೆಟ್ ಫೈನಲ್ ಆದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಈ ಪೈಕಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾರತದ ಶ್ರೀಮಂತ ಮಹಿಳೆಯೊಬ್ಬರು ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದಾರೆ.
ಹೌದು, ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್ ಅವರು ಬಿಜೆಪಿಯಿಂದ ತಮಗೆ ಟಿಕೆಟ್ ಸಿಗಬಹುದು ಎಂಬ ಆಶಯ ಹೊಂದಿದ್ದರು. ಆದರೆ ಸಿಗದ ಕಾರಣ ಸಾವಿತ್ರಿ ಜಿಂದಾಲ್ ಅವರು ಗುರುವಾರ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಮಹಿಳೆ: ಫೋರ್ಬ್ಸ್ ಇಂಡಿಯಾ
74 ವರ್ಷದ ಶ್ರೀಮತಿ ಸಾವಿತ್ರಿ ಅವರು ಹೆಸರಾಂತ ಕೈಗಾರಿಕೋದ್ಯಮಿ ದಿ. ಓಪಿ ಜಿಂದಾಲ್ ಅವರ ಪತ್ನಿ. ಹರಿಯಾಣದ ಸಚಿವ ಮತ್ತು ಹಿಸಾರ್‌ನ ಹಾಲಿ ಶಾಸಕ ಕಮಲ್ ಗುಪ್ತಾ ವಿರುದ್ಧ ಅಖಾಡಕ್ಕೆ ಧುಮುಕಿದ್ದಾರೆ. ಫೋರ್ಬ್ಸ್ ಇಂಡಿಯಾ ವರದಿ ಪ್ರಕಾರ, ಈ ವರ್ಷ 29.1 ಬಿಲಿಯನ್ ಯುಎಸ್‌ಡಿ ನಿವ್ವಳ ಲಾಭ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ತಿಳಿಸಿದೆ.
ಹರಿಯಾಣದಲ್ಲಿ ಒಟ್ಟ 90 ವಿಧಾನಸಭಾ ಸೀಟುಗಳಿಗೆ ಮುಂದಿನ ತಿಂಗಳು ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಹೊರ ಬೀಳಲಿದೆ. ಸದ್ಯ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು ಗೆಲುವಿನ ಕಸರತ್ತು ನಡೆಸಿವೆ.

ಹಿಸಾರ್ ಜೊತೆಗೆ ಉತ್ತಮ ಸಂಬಂಧ
ನಾಮಪತ್ರ ಸಲ್ಲಿಸಿದ ಬಳಿಕ ಕ್ಷೇತ್ರದ ಜನರು ಕುರಿತು ಮಾತನಾಡಿದ ಸಾವಿತ್ರಿ ಜಿಂದಾಲ್ ಅವರು, ಕ್ಷೇತ್ರದ ಅಭಿವೃದ್ಧಿ ಮತ್ತು ಪರಿವರ್ತನೆಗೆ ಪ್ರಾಮಾಣಿಕ ಸೇವೆ ನೀಡಲಿದ್ದೇನೆ. ಹಿಸಾರ್‌ನ ಜನರು ನನ್ನ ಕುಟುಂಬವಿದ್ದತೆ ಓಂ ಪ್ರಕಾಶ್ ಜಿಂದಾಲ್ ಅವರು ಕುಟುಂಬದೊಂದಿಗೆ ನನ್ನ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದು ಭಾವುಕರಾದರು.
ಹಿಂದಿನಿಂದಲೂ ಜಿಂದಾಲ್ ಕುಟುಂಬವು ಹಿಸಾರ್ ಜನರಿಗಾಗಿ ಸೇವೆ ಸಲ್ಲಿಸುತ್ತಿದೆ. ಅದೇ ರೀತಿ ಇಂದು ನಾನು ನನ್ನನ್ನು ನಿಮ್ಮ ಸೇವೆಗೆ, ಕ್ಷೇತ್ರದ ಅಭಿವೃದ್ಧಿಗೆ ಪರಿಪೂರ್ಣವಾಗಿ ಸಮರ್ಪಿಸಿಕೊಂಡಿದ್ದೇನೆ ಎಂದರು.
ಇದೇ ಹಿಸಾರ್ ಕ್ಷೇತ್ರದಿಂದ ಬಿಜೆಪಿ ಕಮಲ್ ಗುಪ್ತಾ ಅವರಿಗೆ ಟಿಕೆಟ್ ಸಿಕ್ಕಿದೆ. ನೀವು ಅವರ ವಿರುದ್ಧ ಹೀಗೆ ಪಕ್ಷೇತರವಾಗಿ ನಿಲ್ಲುವುದು ಬಂಡಾಬ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ನಾನು ಬಂಡಾಯ ಎಂದು ಪರಿಗಣಿಸುವುದಿಲ್ಲ. ನನ್ನ ಪುತ್ರ ನವೀನ್ ಜಿಂದಾಲ್ ಪರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೇ. ಪಕ್ಷದಲ್ಲಿ ಯಾವ ಸದಸ್ಯತ್ವ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಎರಡು ಬಾರಿ ಶಾಸಕಿಯಾಗಿ ಆಯ್ಕೆ
ಇನ್ನೂ ಸಾವಿತ್ರಿ ಜಿಂದಾಲ್ ಅವರ ರಾಜಕೀಯ ಜೀವನ ನೋಡುವುದಾದರೆ, ಅವರು ಹಿಸಾರ್ ಕ್ಷೇತ್ರದಿಂದಲೇ ಈ ಹಿಂದೆ ಎರಡು ಭಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಇದು ಅವರ ಮೂರನೇ ಪ್ರಯತ್ನವಾಗಿದೆ. 2005 ರಲ್ಲಿ ಕಾಂಗ್ರೆಸ್‌ನಿಂದ ಅವರು ಮೊದಲ ಭಾರಿಗೆ ಆಯ್ಕೆ ಆದರು. ನಂತರ 2009ರಲ್ಲಿ ಮರು ಆಯ್ಕೆಯಾದರು. ಈ ವರ್ಷದ ಮಾರ್ಚ್‌ನಲ್ಲಿ ಅವರು ಪುತ್ರ ನವೀನ್ ಜೊತೆಗೂಡಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಇದೀಗ ಅಲ್ಲಿಂದ ಟಿಕೆಟ್ ಬಯಸಿದ್ದರು. ಆದರೆ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.












Click it and Unblock the Notifications