ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಐಎಎಸ್ ಅಧಿಕಾರಿ ಸಾವು, ಸಿಬ್ಬಂದಿಗೆ ಗಾಯ, ಒಮರ್ ಅಬ್ದುಲ್ಲಾ ಕಂಬನಿ
ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿಯನ್ನು ಪಾಕಿಸ್ತಾನ ಮುಂದುವರಿಸಿದೆ. ಇಂದು ಬೆಳಿಗ್ಗೆ ನಡೆದ ಶೆಲ್ ದಾಳಿಯಲ್ಲಿ ರಾಜೌರಿಯ ಹೆಚ್ಚುವರಿ ಉಪ ಆಯುಕ್ತ ರಾಜಕುಮಾರ್ ಥಾಪಾ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜಕುಮಾರ್ ಥಾಪಾ ನಿವಾಸದ ಮೇಲೆ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಅಧಿಕಾರಿ ಸಾವನ್ನಪ್ಪಿರುವುದು ಖಚಿತಗೊಂಡಿದೆ.
ಆಪರೇಷನ್ ಸಿಂಧೂರ ಬಳಿಕ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದಿಂದ ನಿರಂತರವಾಗಿ ಫಿರಂಗಿ ಮತ್ತು ಮೋರ್ಟಾರ್ ಶೆಲ್ ದಾಳಿ ಮುಂದುವರೆದಿದೆ. ಶನಿವಾರ ಬೆಳಿಗ್ಗೆ ರಜೌರಿ ಪಟ್ಟಣದಲ್ಲಿರುವ ಐಎಎಸ್ ಅಧಿಕಾರಿ ನಿವಾಸದ ಮೇಲೆ ಫಿರಂಗಿ ಶೆಲ್ ದಾಳಿ ನಡೆದಾಗ ಥಾಪಾ ಮತ್ತು ಅವರ ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಥಾಪಾ ಮತ್ತು ಅವರ ಸಿಬ್ಬಂದಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು. ಥಾಪಾ ಅವರು ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಅವರ ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿಸಂಸ್ಥೆ 'ಪಿಟಿಐ' ವರದಿ ಮಾಡಿದೆ.

ಈ ಕುರಿತು ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, 'ರಾಜೌರಿಯಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಪಾಕಿಸ್ತಾನದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಮರ್ಥ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಸಂಚರಿಸಿದ್ದರು. ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿಯೂ ಅವರು ಭಾಗವಹಿಸಿದ್ದರು. ಇಂದು ಬೆಳಗಿನ ಜಾವ ಅಧಿಕಾರಿಯ ನಿವಾಸದ ಮೇಲೆ ಪಾಕಿಸ್ತಾನ ಶೆಲ್ ದಾಳಿ ನಡೆಸಿದೆ.
ರಾಜೌರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿಯಾಗಿದೆ. ಈ ದಾಳಿಯಲ್ಲಿ ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ಶ್ರೀ ರಾಜಕುಮಾರ್ ಥಾಪ ಸಾವನ್ನಪ್ಪಿದ್ದಾರೆ. ಈ ಅಮಾನುಷ ಜೀವಹಾನಿಯಿಂದ ನನಗೆ ಆಘಾತವಾಗಿದೆ. ಈ ನೋವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ತಿಳಿಸಿದ್ದಾರೆ.
Devastating news from Rajouri. We have lost a dedicated officer of the J&K Administration Services. Just yesterday he was accompanying the Deputy CM around the district & attended the online meeting I chaired. Today the residence of the officer was hit by Pak shelling as they…
— Omar Abdullah (@OmarAbdullah) May 10, 2025
ರಾಜೌರಿ, ಜಮ್ಮು, ಉರಿ ಪ್ರದೇಶಗಳಲ್ಲಿ ನಿರಂತರ ಶೆಲ್ ದಾಳಿ
ರಾಜೌರಿ, ಜಮ್ಮು ಮತ್ತು ಉರಿ ಪ್ರದೇಶಗಳಲ್ಲಿ ಪಾಕಿಸ್ತಾನದ ಕಡೆಯಿಂದ ನಿರಂತರ ಶೆಲ್ ದಾಳಿ ವರದಿಯಾಗಿದೆ. ಇದರ ಪರಿಣಾಮವಾಗಿ ಹಲವಾರು ನಾಗರಿಕರ ಮನೆಗಳು ದ್ವಂಸಗೊಂಡಿವೆ. ಸಂಘರ್ಷ ಪೀಡಿತ ಪ್ರದೇಶಗಳಿಂದ ನಾಗರಿಕರನ್ನು ಹೊಸ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಸರ್ಕಾರವು ಗಡಿ ಜಿಲ್ಲೆಗಳಾದ್ಯಂತ ಅನೇಕ ಶಿಬಿರಗಳನ್ನು ಸ್ಥಾಪಿಸಿದೆ.
ಪಾಕಿಸ್ತಾನವು ಶುಕ್ರವಾರ ರಾತ್ರಿ ಭಾರತದ 26 ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗೆ ಡ್ರೋನ್ ದಾಳಿಯನ್ನು ಪಾಕಿಸ್ತಾನವು ಆರಂಭಿಸಿದೆ. ಭದ್ರತಾ ಪಡೆಗಳು ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿವೆ.












Click it and Unblock the Notifications