ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಯುಎಇ ; ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದು ಒಪ್ಪಿಕೊಂಡ ಪಾಕ್‌ನ ಮಿತ್ರರಾಷ್ಟ್ರ!
ಹೊಸದಿಲ್ಲಿ : ಯುಎಇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ಅವಿಭಾಜ್ಯ ಅಂಗವೆಂದು ಯುನೈಟೆಡ್ ಅರಬ್ ಎಮಿರೆಟ್ಸ್ ಒಪ್ಪಿಕೊಂಡಿದೆ. ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆ ವೇಳೆ ಭಾರತ - ಮಧ್ಯ ಪ್ರಾಚ್ಯ - ಯುರೋಪ್ ಕಾರಿಡಾರ್ ಘೋಷಣೆಯಾಗಿದೆ. ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ಯುಎಇ ಪಿಒಕೆ ಸೇರಿದ ಭಾರತದ ನಕಾಶೆಯನ್ನು ಬಳಸುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.
ಮಹತ್ವದ ರಾಜತಾಂತ್ರಿಕ ಸೂಚಕವೆಂಬಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉಪ ಪ್ರಧಾನಿ ಸೈಫ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇತ್ತೀಚೆಗೆ ಮುಕ್ತಾಯವಾಗಿರುವ ಜಿ20 ಶೃಂಗಸಭೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಉದ್ದೇಶಿತ ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್‌ನ ನೀಲಿನಕ್ಷೆಯನ್ನು ತೋರಿಸಲಾಗಿದ್ದು, ಈ ವೇಳೆ ಪೂರ್ಣ ಪ್ರಮಾಣದ ಭಾರತದ ನಕಾಶೆಯನ್ನು ಬಳಸಲಾಗಿದೆ. ಆ ನಕಾಶೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ತೋರಿಸಲಾಗಿದೆ. ಇದು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸುವ ರಾಜತಾಂತ್ರಿಕ ಕ್ರಮವನ್ನು ಸೂಚಿಸುತ್ತದೆ.

ಹೊಸದಿಲ್ಲಿಯಲ್ಲಿ ನಡೆದ ಜಿ-20 ಶೃಂಗಸಭೆ ವೇಳೆ ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆಯನ್ನು ಘೋಷಿಸಲಾಯಿತು. ಈ ಕಾರಿಡಾರ್ ಜಿ-20 ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಕಾರಿಡಾರ್ ಭಾರತ, ಮಧ್ಯಪ್ರಾಚ್ಯ ದೇಶಗಳು ಮತ್ತು ಯುರೋಪ್ ನಡುವೆ ಆರ್ಥಿಕ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡಲಿದೆ. ಈಗ ಈ ಕಾರ್ಯತಂತ್ರದ ಭಾಗವಾಗಿ ಪಿಒಕೆ ಕೂಡ ಭಾರತದ್ದು ಎಂದು ಅಂಗೀಕರಿಸಲ್ಪಟ್ಟಿದೆ.
ಯುಎಇ ನಡೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತು!
ಯುಎಇಯ ಉಪಪ್ರಧಾನಿ ಪಿಒಕೆ ಒಳಗೊಂಡ ಭಾರತದ ನಕಾಶೆಯ ವಿಡಿಯೋ ಹಂಚಿಕೊಂಡಿರುವುದು ಪಾಕಿಸ್ತಾನಕ್ಕೆ ಆಘಾತ ತಂದಿದೆ. ಈ ಪ್ರದೇಶದ ಮೇಲೆ ಬಹಳಷ್ಟು ವರ್ಷಗಳಿಂದ ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದ್ದ ಪಾಕಿಸ್ತಾನಕ್ಕೆ ಯುಎಇಯ ನಡೆ ನುಂಗಲಾರದ ತುತ್ತಾಗಿದೆ. ಯುಎಇ ಹಂಚಿಕೊಂಡ ವಿಡಿಯೋ ಮೂಲಕ ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುನರುಚ್ಚರಿಸಿದಂತಾಗುತ್ತದೆ. ಈ ವಿಚಾರದಲ್ಲಿ ಭಾರತದ ನಿಲುವಿನೊಂದಿಗೆ ಯುಎಇ ನಿಂತಂತಾಗಿದೆ.

ವ್ಯಾಪಾರ, ಹೂಡಿಕೆ, ಸಹಕಾರ ಹೆಚ್ಚಿಸುವ ಆರ್ಥಿಕ ಕಾರಿಡಾರ್!
ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ ವಿವಿಧ ವಲಯಗಳಲ್ಲಿ ವ್ಯಾಪಾರ, ಹೂಡಿಕೆ ಮತ್ತು ಸಹಕಾರವನ್ನು ಹೆಚ್ಚಿಸುವ ಭರವಸೆಯನ್ನು ಹೊಂದಿದೆ. ಈ ಪ್ರದೇಶಗಳ ನಡುವಿನ ಸಂಬಂಧಗಳನ್ನು ಕಾರಿಡಾರ್ ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕಾರಿಡಾರ್ ಕಾರ್ಯಾರಂಭ ಮಾಡಿದಂತೆಲ್ಲಾ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಈ ಕಾರಿಡಾರ್‌ನ ಭಾಗವಾಗುವ ರಾಷ್ಟ್ರಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.












Click it and Unblock the Notifications