ಮಾತುಕತೆಯೇ ಪರಿಹಾರ: ಉಕ್ರೇನ್ ವಿಚಾರವಾಗಿ ಪುಟಿನ್‌ಗೆ ಮತ್ತೊಮ್ಮೆ ಸಲಹೆ ನೀಡಿದ ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ದೂರವಾಣಿ ಸಂಭಾಷಣೆಯಲ್ಲಿ ಇಂಧನ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು.
ಉಕ್ರೇನ್ ಬಿಕ್ಕಟ್ಟಿನ ಕುರಿತು ಪುಟಿನ್ ಜೊತೆ ಮಾತನಾಡಿರುವ ಮೋದಿ, 'ರಾಜತಾಂತ್ರಿಕವಾಗಿ ಮಾತುಕತೆ ನಡೆಸುವುದೇ ಪರಿಹಾರ' ಎಂದು ಪುನರುಚ್ಚರಿಸಿದರು.
ಈ ವರ್ಷದ ಫೆಬ್ರವರಿಯಿಂದ ಉಭಯ ನಾಯಕರ ನಡುವಿನ ಐದನೇ ದೂರವಾಣಿ ಸಂಭಾಷಣೆ ಇದಾಗಿದೆ.
ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಅಂತ್ಯದಲ್ಲಿ ಈ ಇಬ್ಬರು ನಾಯಕರು ಪರಸ್ಪರ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿಯೇ ಮೋದಿ ಅವರು ಉಕ್ರೇನ್ ಬಿಕ್ಕಟ್ಟಿನ ಕುರಿತು ಪುಟಿನ್ ಅವರಿಗೆ ಸಲಹೆ ನೀಡಿದ್ದರು. 'ಇದು ಯುದ್ಧದ ಯುಗವಲ್ಲ' ಎಂದು ಪುಟಿಗೆ ತಿಳಿಸಿದ್ದರು.

ಶುಕ್ರವಾರದ ದೂರವಾಣಿ ಕರೆ ಸಮರ್‌ಕಂಡ್‌ನಲ್ಲಿನ ಇಬ್ಬರು ನಾಯಕರ ನಡುವಿನ ಸಭೆಯಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಇಂಧನ ಸಹಕಾರ, ವ್ಯಾಪಾರ ಮತ್ತು ಹೂಡಿಕೆಗಳು, ರಕ್ಷಣೆ ಮತ್ತು ಭದ್ರತಾ ಸಹಕಾರ ಹಾಗೂ ಇತರ ಪ್ರಮುಖ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಹಲವಾರು ವಿಚಾರಗಳ ಕುರಿತಾಗಿಯೂ ಉಭಯ ನಾಯಕರು ಮಾತುಕತೆ ನಡೆಸಿದರು.
ಜಿ-20 ರ ಭಾರತದ ಅಧ್ಯಕ್ಷ ಸ್ಥಾನದ ಬಗ್ಗೆ ಮೋದಿ, ಪುಟಿನ್ ಅವರಿಗೆ ವಿವರಿಸಿದರು. ಅದರ ಪ್ರಮುಖ ಆದ್ಯತೆಗಳನ್ನು ಎತ್ತಿ ತೋರಿಸಿದರು. ಭಾರತದ ಅಧ್ಯಕ್ಷತೆಯಲ್ಲಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮೋದಿ ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗಿದೆ.
ಉಭಯ ನಾಯಕರು ಪರಸ್ಪರ ನಿರಂತರ ಸಂಪರ್ಕದಲ್ಲಿರಲು ಸಹ ಒಪ್ಪಿಕೊಂಡರು.
ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಆರಂಭಗೊಂಡು ಹಲವು ತಿಂಗಳುಗಳೇ ಕಳೆದಿವೆ. ಎರಡೂ ಕಡೆ ಸಾವಿರಾರು ಸೈನಿಕರು ಹಾಗೂ ನಾಗರಿಕರು ಅಸುನೀಗಿದ್ದಾರೆ. ಯೂರೋಪ್ ರಾಷ್ಟ್ರಗಳು, ಅಮೆರಿಕ ಹಾಗೂ ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳು ಯುದ್ಧವನ್ನು ವಿರೋಧಿಸಿವೆ.












Click it and Unblock the Notifications