ಭಾರತದಲ್ಲಿ 207 ದಿನದಲ್ಲಿ ಕೊರೊನಾವೈರಸ್ ಲಸಿಕೆ ಪಡೆದವರೆಷ್ಟು ಮಂದಿ!?
ನವದೆಹಲಿ, ಆಗಸ್ಟ್ 10: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆ ಪ್ರತಿನಿತ್ಯ 50 ಲಕ್ಷದ ಗಡಿ ದಾಟುತ್ತಿದ್ದ ಲಸಿಕೆ ವಿತರಣೆ ಪ್ರಮಾಣ ಮತ್ತೊಮ್ಮೆ ಇಳಿಮುಖವಾಗಿದೆ. ದೇಶದಲ್ಲಿ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 207 ದಿನಗಳಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 207 ದಿನಗಳಲ್ಲಿ 51.85 ಕೋಟಿಗೂ ಅಧಿಕ ಮಂದಿಗೆ ಲಸಿಕೆ ವಿತರಿಸಲಾಗಿದೆ. ಮಂಗಳವಾರ ರಾತ್ರಿ 8 ಗಂಟೆ ವೇಳೆಗೆ 37,76,765 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 51,85,17,148 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಯ ಶೇ.75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಕಂಪನಿಗಳಿಂದ ನೇರವಾಗಿ ಖರೀದಿಸುತ್ತದೆ. ಹೀಗೆ ಖರೀದಿಸಿದ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ.

ಮಧ್ಯಮ ವಯಸ್ಕರಿಗೆ ಲಸಿಕೆ ನೀಡುವಲ್ಲಿ ಒತ್ತು:
ಕೊರೊನಾವೈರಸ್ ಎರಡನೇ ಅಲೆಯಲ್ಲಿ ಅತಿಹೆಚ್ಚು ಸೋಂಕು ತಗುಲಿರುವುದು ಹಾಗೂ ಸಾವಿನ ಸಂಖ್ಯೆಯಲ್ಲಿ ಅತಿಹೆಚ್ಚು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನೆಲೆ 18 ರಿಂದ 44 ವರ್ಷದ ವಯೋಮಾನದವರಿಗೆ ಲಸಿಕೆ ನೀಡುವುದಕ್ಕೆ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ ಮಂಗಳವಾರ ಒಂದೇ ದಿನ 18 ರಿಂದ 44 ವಯೋಮಾನದ 20,47,733 ಜನರಿಗೆ ಮೊದಲ ಡೋಸ್ ಹಾಗೂ 4,05,719 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದೇ ವಯೋಮಾನದ 18,20,95,467 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 1,29,39,239 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಅತಿಹೆಚ್ಚು ಲಸಿಕೆ ವಿತರಿಸಿದ ರಾಜ್ಯಗಳು ಯಾವುವು?
ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 18-44 ವಯೋಮಾನದ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಇದರ ಹೊರತಾಗಿ ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ದೆಹಲಿ, ಹರಿಯಾಣ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ 18-44 ವಯೋಮಾನದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
ಕೊವಿಡ್-19 ಲಸಿಕೆ ವಿತರಣೆಯ ಹಂತಗಳು
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲಭ್ಯತೆ:
2021ರ ಆಗಸ್ಟ್ 10ರ ಅಂಕಿ-ಅಂಶಗಳ ಪ್ರಕಾರ, 52,56,35,710 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 52,56,35,710
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 48,43,100
* ಬಳಕೆ ಆಗಿರುವ ಲಸಿಕೆ ಪ್ರಮಾಣ - 51,09,58,562
* ಕೊವಿಡ್-19 ಲಸಿಕೆಯ ಲಭ್ಯತೆ - 2,07,55,852












Click it and Unblock the Notifications