ಭಾರತದಲ್ಲಿ 115 ದಿನಗಳ ಕೊರೊನಾವೈರಸ್ ಲಸಿಕೆ ಕಥೆ ಏನಾಗಿದೆ?
ನವದೆಹಲಿ, ಮೇ 11: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸದ ನಡುವೆ ಲಸಿಕೆ ವಿತರಣೆಯ ಹಂತಗಳನ್ನು ಹೆಚ್ಚಾಗುತ್ತಿವೆಯೇ ವಿನಃ ಲಸಿಕ ವಿತರಣೆ ಪ್ರಮಾಣ ಮಾತ್ರ ಏರಿಕೆಯಾಗುತ್ತಿಲ್ಲ. ದೇಶದಲ್ಲಿ ಲಸಿಕೆ ಕೊರತೆ ಸೃಷ್ಟಿಯಾಗಿದೆ ಎನ್ನುವುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.
ದೇಶದಲ್ಲಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಒಂದು ದಿನದಲ್ಲಿ 30-35 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗುತ್ತಿತ್ತು. ಪ್ರಸ್ತುತ ಸ್ಥಿತಿಯಲ್ಲಿ ಕೇವಲ 24 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಕೊರೊನಾವೈರಸ್ ಲಸಿಕೆ ವಿತರಣೆ ಆರಂಭವಾಗಿ 115 ದಿನಗಳಲ್ಲಿ 17,26,33,761 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.
ಕಳದೆ 24 ಗಂಟೆಗಳಲ್ಲಿ 24,30,017 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 10,47,092 ಜನರಿಗೆ ಮೊದಲ ಡೋಸ್ ಹಾಗೂ 13,82,925 ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಮೂರು ಹಂತಗಳಲ್ಲಿ ಲಸಿಕೆ ವಿತರಣೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ವೇಗಕ್ಕೆ ಕಡಿವಾಣ ಹಾಕಲು ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು, ಎರಡನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.
ಯಾವ ಹಂತದಲ್ಲಿ ಯಾರಿಗೆಷ್ಟು ಲಸಿಕೆ ವಿತರಣೆ?
ಕಳೆದ ಮೇ 1ರಿಂದ ಈವರೆಗೂ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ 25,52,843 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಭಾರತದಲ್ಲಿ ಈವರೆಗೂ 95,63,406 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 65,05,072 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,40,49,681 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 78,51,075 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 5,54,97,658 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 71,73,939 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 5,38,00,706 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,56,39,381 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.












Click it and Unblock the Notifications