ಭಾರತದಲ್ಲಿ ಒಂದೇ ದಿನ 27 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ
ನವದೆಹಲಿ, ಮೇ 1: ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ಇಲ್ಲಿಯವರೆಗೂ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು, 45 ವರ್ಷ ಮೇಲ್ಪಟ್ಟ ಎಲ್ಲಿರಿಗೂ ನೀಡಲಾಗುತ್ತಿತ್ತು. ಶನಿವಾರದಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಭಾರತದತಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 105 ದಿನಗಳೇ ಕಳೆದು ಹೋಗಿವೆ. ದೇಶದಲ್ಲಿ ಈವರೆಗೂ 15,49,89,635 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ 27 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 27,44,485 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಪೈಕಿ 15,69,846 ಮಂದಿಗೆ ಮೊದಲ ಡೋಸ್ ಹಾಗೂ 11,74,639 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ:
ಭಾರತದಲ್ಲಿ ಈವರೆಗೂ 94,12,140 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 62,41,915 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,25,58,069 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 68,15,115 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ:
ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 5,27,07,921 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 37,74,930 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 5,23,78,616 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,11,00,929 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಭಾರತದಲ್ಲಿ ಮೂರು ಮಾದರಿ ಲಸಿಕೆಗೆ ಅನುಮೋದನೆ:
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೂ ಅನುಮೋದನೆ ನೀಡಲಾಗಿದೆ.












Click it and Unblock the Notifications