IMD Weather Forecast: ಈ ಭಾಗಗಳಲ್ಲಿ ದಟ್ಟ ಮಂಜು, ಶೀತಗಾಳಿ ನಡುವೆ ಭಾರೀ ಮಳೆ ಸಾಧ್ಯತೆ
IMD Weather Forecast: ದೇಶದ ಬಹುತೇಕ ಭಾಗಗಳಲ್ಲಿ ಚಳಿ ವಾತಾವರಣ ಮುಂದುವರೆದಿದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ವಿಪರೀತ ಶೀತಗಾಳಿ ಬೀಸುತ್ತಿದೆ. ಯಾವ ಮಟ್ಟಕ್ಕೆ ಅಂದ್ರೆ, ಅಲ್ಲಿನ ಜನರು ಬೆಳಗ್ಗೆ ಹಾಗೂ ಸಂಜೆ ಆದ್ರೆ ಸಾಕು ಮನೆ ಬಿಟ್ಟು ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆಯೇ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಶೀತಗಾಳಿ ಮುಂದುವರೆದಿದೆ. ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಭಾರೀ ಶೀತಗಾಳಿ ಬೀಸುತ್ತಿದ್ದು, ಈ ಭಾಗಗಳ ಜನರು ತತ್ತರಿಸಿ ಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಮಳೆ, ಹಿಮಪಾತದ ಜೊತೆ ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ಇದೀಗ ಸದ್ಯ ಭಾರೀ ಶೀತಗಾಳಿ ಮುಂದುವರೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಲ್ಲೆಲ್ಲಿ ಮಳೆ?: ಜಮ್ಮು, ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶದಲ್ಲಿ ಮುಂದಿನ ಎರಡು ದಿನ ಪ್ರತ್ಯೇಕವಾಗಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಪಂಜಾಬ್, ಹರಿಯಾಣ, ಚಂಡೀಗಢ, ನವದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬೆಳಗ್ಗೆ ಮತ್ತು ರಾತ್ರಿ ವೇಳೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ದೇಶದ ಉಳಿದ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡುಬರುವುದಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಹಾಗೂ ಹಿಮಪಾತಗುವ ಸಾಧ್ಯತೆಯಿದೆ. ಈ ಭಾಗಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜನರಿಗೆ ಪ್ರಮುಖ ಸಲಹೆಗಳು: ಇದೀಗ ಬಹುತೇಕ ರಾಜ್ಯಗಳಲ್ಲಿ ಭಾರೀ ಚಳಿಗಳಿ ಮುಂದುವರೆದಿದೆ. ಈ ವೇಳೆ ಜನರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಚಳಿಗಾಲದಲ್ಲಿ ಆರೋಗ್ಯ ಹಾಗೂ ಸುರಕ್ಷತೆ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅಗತ್ಯ.
ಈ ಸಮಯದಲ್ಲಿ ದೇಹವನ್ನು ಸದಾ ಬೆಚ್ಚಗಿರಿಸುವಂತೆ ಹತ್ತಿಯಿಂದ ತಯಾರಿಸಲಾದ ಉಡುಪುಗಳನ್ನು ಧರಿಸಬೇಕು. ವಿಶೇಷವಾಗಿ ತಲೆ, ಕಿವಿ, ಕುತ್ತಿಗೆ ಹಾಗೂ ಕೈ-ಕಾಲುಗಳನ್ನು ಮುಚ್ಚಿಕೊಳ್ಳುವಂತೆ ಬಟ್ಟೆಗಳನ್ನು ಧರಿಸುವುದು ಉತ್ತಮ. ಚಳಿ ಹೆಚ್ಚಿರುವುದರಿಂದ ಕೆಮ್ಮು, ಶೀತ, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಬಿಸಿ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು ಹಾಗೂ ತಣ್ಣನೆಯ ಪಾನೀಯಗಳ ಸೇವನೆಯಿಂದ ದೂರ ಇರಬೇಕು.
ಚಳಿಗಾಲದಲ್ಲೂ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗಿದ್ದು, ಉಗುರುಬೆಚ್ಚಗಿನ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಒಳಿತು. ಬೆಳಗ್ಗೆ ಹಾಗೂ ರಾತ್ರಿ ವೇಳೆ ದಟ್ಟ ಮಂಜು ಮತ್ತು ಶೀತಗಾಳಿ ಇರುವುದರಿಂದ ಅನಗತ್ಯವಾಗಿ ಹೊರಗಡೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು.
ಅದರಲ್ಲೂ ವಯೋವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಹೊರಗಡೆ ಹೋಗದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಹವಾಮಾನ ಇಲಾಖೆ ನೀಡುವ ಎಚ್ಚರಿಕೆಗಳನ್ನು ಪಾಲಿಸುವುದು ಚಳಿಗಾಲದಲ್ಲಿ ಸುರಕ್ಷಿತವಾಗಿರಲು ಸಹಕಾರಿ ಆಗುತ್ತದೆ.












Click it and Unblock the Notifications