IMD Weather Forecast: ಮೇ ಅಂತ್ಯದವರೆಗೂ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
IMD Weather Forecast: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಈ ಭಾಗಗಳಲ್ಲಿ ಮೇ ತಿಂಗಳ ಅಂತ್ಯದವರೆಗೂ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳವರೆಗೆ ಕೆಲವು ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಕೆಲವೆಡೆ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಯಿರಿ.

ಇಂದು (ಮೇ 24, ಶನಿವಾರ) ಕೊಂಕಣ ಮತ್ತು ಗೋವಾದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆದ್ದು, ಮುಂಜಾಗ್ರತಾ ಕ್ರಮವಾಗಿ ಈ ಭಾಗಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇದೇ ವೇಳೇ ಅಸ್ಸಾಂ, ಮೇಘಾಲಯ, ಕರಾವಳಿ ಕರ್ನಾಟಕ, ಕೇರಳ, ಮಾಹೆ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವು ಸ್ಥಳಗಳಲ್ಲಿಯೂ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಅಂತಲೂ ಮುನ್ಸೂಚನೆ ನೀಡಿದೆ.
ಯಾವಾಗ ಬೇಕಾದರೂ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆ, ಕೆಲವು ರಾಜ್ಯಗಳ ಜನರಿಗೆ ಎಚ್ಚರದಿಂದ ಇರುವಂತೆ ಮತ್ತು ಅಗತ್ಯವಿದ್ದರೆ ನದಿತೀರದಂತಹ ಪ್ರದೇಶದಗಳಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿರುವಂತೆ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಮಹಾರಾಷ್ಟ್ರ, ಜಾರ್ಖಂಡ್, ಗೋವಾ, ಕೇರಳ, ಕರ್ನಾಟಕ, ರಾಷ್ಟ್ರ ರಾಜಧಾನಿ ನವದೆಹಲಿ ಹಲವೆಡೆ ಮುಂದಿನ ಹಲವು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 27ರ ವೆಗೂ ಮುಂಬೈ, ಥಾಣೆ ಮತ್ತು ಪಾಲ್ಘರ್‌ನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆದರೆ, ನೆರೆಯ ಜಿಲ್ಲೆಗಳಾದ ರಾಯಗಢ ಮತ್ತು ರತ್ನಗಿರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮಂಗಳವಾರದವರೆಗೂ ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈಗಾಗಲೇ ಮೇ 23ರಂದು ಈ ಭಾಗಗಳಿಗೆ ರೆಡ್ ಅಲರ್ಟ್ ನೀಡಲಾಗಿತ್ತು.
ಮೇ 23ರಿಂದ 29ರ ವರೆಗೆ, ಕೊಂಕಣ ಮತ್ತು ಗೋವಾದಲ್ಲಿ ಗುಡುಗು, ಮಿಂಚು ಸಹಿತ ಬಿರಗಾಳಿ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗದಲ್ಲಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಅಂತಲೂ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೇ 24 ಹಾಗೂ 25ರಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜೊತೆಗೆ ಗಂಟೆಗೆ 40-50 ಕಿಲೋ ಮೀಟರ್ ಗಾಳಿ ಬೀಸಲಿದೆ ಎಂದು ತಿಳಿಸಿದೆ. ಇನ್ನು ಮೇ 26 ಮತ್ತು 27ರಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮೇ 23 ರಿಂದ 27ರ ವರೆಗೆ ಆಂಧ್ರ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಉಯಾಗುವ ಸಾಧ್ಯತೆಯಿದ್ದು, ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರಾವಳಿ ಆಂಧ್ರಪ್ರದೇಶ, ಯಾಣಂ, ದಕ್ಷಿಣ ಕರಾವಳಿ ಆಂಧ್ರಪ್ರದೇಶ, ಮತ್ತು ರಾಯಲಸೀಮಾದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಎಂದು ಮುನ್ಸೂಚನೆ ನೀಡಿದೆ.
ಮೇ 29ರ ವರೆಗೆ ಜಾರ್ಖಂಡ್‌ನಲ್ಲಿ ಗುಡುಗು, ಮಿಂಚುಸಹಿತ ವ್ಯಾಪಕವಾಗಿ ಬಿರುಗಾಳಳಿ ಮಳೆಯಾಗುವ ಸಾಧ್ಯತೆಯಿದೆ. ಸರಾಸರಿಗಿಂತ ಕಡಿಮೆ ಗರಿಷ್ಠ ತಾಪಮಾನ ಮುಂದುವರಿಯುವ ನಿರೀಕ್ಷೆಯಿದೆ. ಇನ್ನು ಮೇ 30ರಿಂದ ಜೂನ್ 5ರ ವರೆಗೆ ಮತ್ತೆ ಮಳೆ ಮುಂದುವರೆಯುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ?: ಮೇ 27ರ ವರೆಗೆ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಈ ಭಾಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ, ಈ ಭಾಗಗಳಲ್ಲಿ ಮೀನುಗಾರರು ಆಳ ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಿದೆ.
ಮುಂದಿನ ವಾರ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಅಲ್ಲಿವರೆಗೂ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡಿನ ಇತರ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ನೀಡಲಾಗಿದೆ.
ಎಲ್ಲೆಲ್ಲಿ ತಾಪಮಾನ ಹೆಚ್ಚಳ?: ಮುಂದಿನ ಎರಡು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನ 2-4°Cರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications