IMD Weather Forecast: ಭೀಕರ ಚಳಿ ನಡುವೆಯೂ ಈ ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ರಣಚಂಡಿ ಮಳೆ ಮುನ್ಸೂಚನೆ
India Weather Forecat: ದೇಶದ ಬಹುತೇಕ ರಾಜ್ಯಗಳಲ್ಲಿ ಶೀತಗಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ನಡುವೆಯೇ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ 48 ಗಂಟೆಗಳಲ್ಲಿ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಲಿದೆ. ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಭಾಗಗಳಲ್ಲಿ ಹಿಮಪಾತ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆಯೇ ಮುಂದಿನ 24 ಗಂಟೆಗಳಲ್ಲಿ ರಣಭೀಕರ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಮಧ್ಯಮ ಮಳೆಯೊಂದಿಗೆ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಲಕ್ಷದ್ವೀಪಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಮುನ್ಸೂಚನೆ ನೀಡಿದೆ.
ಅಲ್ಲದೆ, ಇದೇ ವೇಳೆ ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನಲ್ಲಿ ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಪಶ್ಚಿಮದಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂಜಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಅಂತಲೂ ಐಎಂಡಿ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಪಶ್ಚಿಮ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಶೀತ ಅಲೆಗಳು ಹೆಚ್ಚಾಗಬಹುದು. ಮುಂದಿನ 2-3 ದಿನಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕನಿಷ್ಠ ತಾಪಮಾನ ಕ್ರಮೇಣ ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಪೂರ್ವ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಹೆಚ್ಚಳ ಆಗುವ ಸಾಧ್ಯತೆಯಿದೆ. ನಂತರ ಯಾವುದೇ ಗಮನಾರ್ಹ ಬದಲಾವಣೆಗಳು ಆಗುವುದಿಲ್ಲ ಎಂದು ತಿಳಿಸಿದೆ.
ಮುಂದಿನ ಮೂರು ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ಗುಡ್ಡಗಾಡು ರಾಜ್ಯಗಳಲ್ಲಿ ಹಿಮಪಾತ ಆಗುವ ನಿರೀಕ್ಷೆಯಿದ್ದು, ಚಳಿ ತೀವ್ರವಾಗಿ ಹೆಚ್ಚಳ ಆಗಲಿದ್ದು, ಅಲ್ಲಲ್ಲಿ ಪ್ರತ್ಯೇಕವಾಗಿ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ ನವೆಂಬರ್ 21ರಿಂದ 25ರ ವರೆಗೆ ದಕ್ಷಿಣ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ತಿಳಿಸಿದೆ.
ರಾಜಸ್ಥಾನದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಶೇಖಾವತಿ ಪ್ರದೇಶದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ. ಫತೇಪುರದಲ್ಲಿ ನಿನ್ನೆ ಅಂದರೆ ಗುರುವಾರ ಕನಿಷ್ಠ ತಾಪಮಾನ 6.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ನಾಗೌರ್‌ನಲ್ಲಿ 6.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಶೇಷವಾಗಿ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದು, ಇದು ಸಾಮಾನ್ಯ ದಿನಗಳಿಗಿಂತ 3-4 ಡಿಗ್ರಿ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಭಾರತದ ಹವಾಮಾನ ವಿವರ: ದಕ್ಷಿಣ ಭಾರತಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ದ್ವೀಪಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹಲವಾರು ಪ್ರದೇಶಗಳಲ್ಲಿ ಬಲವಾದ ಗಾಳಿಯೊಂದಿಗೆ ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿ ಹವಾಮಾನ ಮುನ್ಸೂಚನೆ: ನವೆಂಬರ್ 21ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗುವ ನಿರೀಕ್ಷೆಯಿದೆ. ಗಂಟೆಗೆ 15ರಿಂದ 20 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications