IMD Weather Forecast: ಚಂಡಮಾರುತ ಹಿನ್ನೆಲೆ ಈ ಭಾಗಗಳಲ್ಲಿ ಮುಂದಿನ 5 ದಿನ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಆರ್ಭಟ ಮುಂದುವರೆದಿದೆ. ಮತ್ತೊಂದೆಡೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದೆ. ಈ ಹಿನ್ನೆಲೆ ಇನ್ನೂ ಮುಂದಿನ 5 ದಿನಗಳ ಕಾಲ ಈ ಭಾಗಳಲ್ಲಿ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೇಶದ ಹಲವೆಡೆ ಸಾಧಾರಣ ಮಳೆ ಮುಂದುವರೆದರೆ, ಇನ್ನೂ ಕೆಲವು ಕಡೆಗಳಲ್ಲಿ ರಣಮಳೆ ಸುರಿಯುವ ಸಾಧ್ಯತೆ ಇದೆ. ಈಗಾಗಲೇ ಅದರಲ್ಲೂ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ಅವಾಂತರಗಳೇ ಸಂಭವಿಸಿವೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದೀಗ ಮಳೆರಾಯನ ಆರ್ಭಟ ತಗ್ಗಿದೆ. ಇಂದು (ಸೆಪ್ಟೆಂಬರ್ 7) ಮೋಡ ಕವಿದ ವಾತಾವರಣ ಹಿಂದೆ ಸರಿದು ಸೂರ್ಯದೇವ ಎಂಟ್ರಿ ಕೊಟ್ಟಿದ್ದಾನೆ. ಇದರಿಂದ ಈ ಭಾಗಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಷ್ಟು ದಿನ ಮಳೆರಾಯನ ಆರ್ಭಟಕ್ಕೆ ನಲುಗಿಹೋಗಿದ್ದರು. ದೆಹಲಿ ಮತ್ತು ನೋಯ್ಡಾದಲ್ಲಿ ಇಂದು ಸೂರ್ಯನ ದರ್ಶನ ಆಗಿದೆ.
ದೆಹಲಿಗೆ ಮತ್ತೆ ಮಳೆ ಆರ್ಭಟದ ಎಚ್ಚರಿಕೆ: ಆದರೆ, ಮುಂದಿನ ಎರಡು ದಿನಗಳ ಕಾಲ ಈ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಮತ್ತೆ ಮುಂಗಾರು ಮಳೆ ಚುರುಕು ಪಡೆಯಲಿದ್ದು, ಇಂದು ಹಲವೆಡೆ ಮಧ್ಯಾಹ್ನದ ಹಗುರ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ನಾಳೆ (ಸೆಪ್ಟೆಂಬರ್ 8) ಕೂಡ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ. ಆದರೆ ಸೆಪ್ಟೆಂಬರ್ 9ರಂದು ಗುಡುಗು ಸಹಿತ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ನಂತರ ಸೆಪ್ಟೆಂಬರ್ 12ರಿಂದ ಹಗುರ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಬಂಗಾಳಕೊಲ್ಲಿ ಚಂಡಮಾರುತ ಹಿನ್ನೆಲೆ ಪೂರ್ವ ಉತ್ತರ ಪ್ರದೇಶದ ಗೋರಖ್‌ಪುರ, ಡಿಯೋರಿಯಾ ಮತ್ತು ಕುಶಿನಗರದಲ್ಲಿ ಹವಾಮಾನ ಬದಲಾಗಿದೆ. ಇಂದು ಈ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಈಗಾಗಲೇ ನಿನ್ನೆ ಶನಿವಾರ ಸಂಜೆ ಹವಾಮಾನದಲ್ಲಿ ದಿಢೀರ್ ಬದಲಾವಣೆ ಕಂಡುಬಂದಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ಮಂದಿನ ಹಲವು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ಸಂದೇಶವನ್ನು ನೀಡಿದೆ.
ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸೆಪ್ಟೆಂಬರ್ 10 ಮತ್ತು 11ರಂದು ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಗೋರಖ್‌ಪುರದಲ್ಲಿ ಮುಂದಿನ ಕೆಲವು ದಿನಗಳವರೆಗೆ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಎಲ್ಲಿವರೆಗೂ ಮಳೆ?: ಮುಂದಿನ ಹಲವು ದಿನಗಳ ಕಾಲ ಪಶ್ಚಿಮ ಮತ್ತು ವಾಯುವ್ಯ ಭಾರತದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಯಾವಾಗ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸೆಪ್ಟೆಂಬರ್ 9ರಂದು ಪಶ್ಚಿಮ ರಾಜಸ್ಥಾನ, ಸೆಪ್ಟೆಂಬರ್ 7ರಿಂದ 12ರ ವರೆಗೆ ಉತ್ತರಾಖಂಡದ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 8 ಪೂರ್ವ ರಾಜಸ್ಥಾನ ಮತ್ತು ಗುಜರಾತ್, ಸೆಪ್ಟೆಂಬರ್ 7 ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದೇ ವೇಳೆ ಪೂರ್ವ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications