ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಅಧಿಕ ಮಳೆ ಮುನ್ಸೂಚನೆ
ನವದೆಹಲಿ, ಆಗಸ್ಟ್ 23: ದೇಶಾದ್ಯಂತ ಮುಂಗಾರು ಚುರುಕಾಗಿದ್ದು, ಆಗಸ್ಟ್ 26ರವರೆಗೂ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕ ಮಳೆಯಾಗುವುದಾಗಿ ತಿಳಿಸಿದೆ. ಸೋಮವಾರದಿಂದ ಈ ಎರಡು ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಆಗಸ್ಟ್ 26ರವರೆಗೂ ಅಧಿಕ ಮಳೆ ಮುಂದುವರೆಯುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಸೋಮವಾರದಿಂದ ವಾಯವ್ಯ ಭಾರತದಲ್ಲಿ ಮಳೆ ಪ್ರಮಾಣ ತಗ್ಗುವುದಾಗಿ ತಿಳಿಸಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ಚದುರಿದ ಮಳೆ ಮುಂದುವರೆಯುವುದಾಗಿ ಸೂಚಿಸಿದೆ. ಮುಂದೆ ಓದಿ...

ಈಶಾನ್ಯ ರಾಜ್ಯಗಳಲ್ಲಿ ಇಂದಿನಿಂದ ಮಳೆ ಹೆಚ್ಚಳ
ಆಗಸ್ಟ್ 24ರಿಂದ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಆಗಸ್ಟ್ 24ರಿಂದ 26ರವರೆಗೆ ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ. ಆಗಸ್ಟ್ 25-26ರವರೆಗೆ ಬಿಹಾರದಲ್ಲಿ ಅತ್ಯಧಿಕ ಮಳೆ ದಾಖಲಾಗಲಿದೆ ಎಂದು ತಿಳಿಸಿದೆ. ಅಸ್ಸಾಂ ಹಾಗೂ ಮೇಘಾಲಯದಲ್ಲಿ ಆಗಸ್ಟ್ 25ರಂದು ಹೆಚ್ಚಿನ ಮಳೆಯಾಗಲಿದೆ.

ಮುಂದಿನ ನಾಲ್ಕೈದು ದಿನಗಳ ಕಾಲ ಈ ರಾಜ್ಯಗಳಲ್ಲಿ ಮಳೆ
ಪೂರ್ವ ಹಾಗೂ ಪಶ್ಚಿಮ ರಾಜಸ್ಥಾನ, ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಸೋಮವಾರ ಅಧಿಕ ಮಳೆಯಾಗಲಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಶುಕ್ರವಾರದಿಂದ ಮತ್ತೆ ಹೆಚ್ಚಿನ ಮಳೆಯಾಗುತ್ತಿದೆ. ಸ್ವಲ್ವ ದಿನಗಳ ಕಾಲ ಬಿಡುವು ಪಡೆದುಕೊಂಡಿದ್ದ ಮಳೆ ಮತ್ತೆ ಆರಂಭವಾಗಿದೆ. ಗುರುಗ್ರಾಮ, ನೊಯ್ಡಾ, ಆಜಾದ್‌ಪುರ, ಕನ್ನೌಟ್‌ನಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ಶನಿವಾರ ಒಂದೇ ದಿನದಲ್ಲಿ ದೆಹಲಿಯಲ್ಲಿ 138.8 ಎಂಎಂ ಮಳೆಯಾಗಿದ್ದು, ಈ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚಿನ ದಿನನಿತ್ಯದ ಮಳೆ ಪ್ರಮಾಣ ಇದಾಗಿದೆ. ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಮತ್ತೆ ಚುರುಕಾಗಿರುವ ಮುಂಗಾರು
ಜುಲೈ ದ್ವಿತೀಯಾರ್ಧದಲ್ಲಿ ಭಾರೀ ಮಳೆಯಾದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮಳೆ ಚಟುವಟಿಕೆ ಕ್ಷೀಣಿಸಿತ್ತು. ಆಗಸ್ಟ್ ಮೊದಲ ವಾರ ಮತ್ತೆ ಮಳೆ ಆರಂಭವಾಗಿ ನಂತರ ಕಡಿಮೆಯಾಗಿತ್ತು. ಇದೀಗ ಮಳೆಯಿಂದ ಬಿಡುವು ಪಡೆದುಕೊಂಡಿದ್ದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಚಟುವಟಿಕೆ ಆರಂಭವಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ವಿದರ್ಭಾದಲ್ಲಿ ಚಂಡಮಾರುತದ ಪ್ರಭಾವದಿಂದ ನೆರೆಹೊರೆ ರಾಜ್ಯಗಳಲ್ಲಿ ಅಧಿಕ ಮಳೆಯಾಗುತ್ತಿದೆ.

ಕರ್ನಾಟಕದ 9 ಜಿಲ್ಲೆಗಳಲ್ಲಿ ಅಧಿಕ ಮಳೆ ಮುನ್ಸೂಚನೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸೋಮವಾರ ಹಾಗೂ ಮಂಗಳವಾರ ಕರ್ನಾಟಕದಲ್ಲಿ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಧಿಕ ಮಳೆ ಸೂಚನೆ ನೀಡಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಭಾರತದಲ್ಲಿ ಮುಂದಿನ ಮೂರು ದಿನಗಳಲ್ಲಿ ವ್ಯಾಪಕ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ. ಆಗಸ್ಟ್ 23ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಆಗಸ್ಟ್ 22ರಂದು ಕೇರಳ ಹಾಗೂ ಮಾಹೆ, ಆಗಸ್ಟ್ 23, 24ರಂದು ರಾಯಲ್ ಸೀಮೆ ಹಾಗೂ ಆಗಸ್ಟ್ 21ರಂದು ಆಂಧ್ರದ ಕರಾವಳಿ ಪ್ರದೇಶ, ಯಾನಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿಯೂ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications