IMD Weather: ಮತ್ತೆ ವಾಯುಭಾರ ಕುಸಿತ! ವಿವಿಧ ಭಾಗಗಳಲ್ಲಿ ಮಳೆ, ಶೀತ ಅಲೆ ಮುನ್ಸೂಚನೆ
ನವದೆಹಲಿ: ದೇಶದ ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳ ಹವಾಮಾನದಲ್ಲಿ ಒಂದೇ ದಿನದಲ್ಲಿ ತೀವ್ರ ಸ್ವರೂಪದ ಬದಲಾವಣೆಗಳು ಆಗಿವೆ. ಸಾಮಾನ್ಯ ಎಂಬಂತಿದ್ದ ಚಳಿ, ದಟ್ಟ ಮಂಜಿನ ಪ್ರಮಾಣದಲ್ಲಿ ಏರಿಕೆ ಆಗಿದ್ದು ಕೆಲವು ರಾಜ್ಯಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನೊಂದೆಡೆ ವಾಯುಭಾರ ಕುಸಿತ ಹಾಗೂ ಚಂಡಮಾರುತ ಪರಿಚಲನೆ ಉಂಟಾಗಿದೆ. ಇದರಿಂದ ದಕ್ಷಿಣ ಭಾಗದ ಕೆಲವೆಡೆ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಹವಾಮಾನ ವೈಪರೀತ್ಯಗಳ ಅಪ್ಡೇಟ್ ನೋಡುವುದಾದರೆ, ತಮಿಳುನಾಡು, ಚೆನ್ನೈ ಕರಾವಳಿ ಸಮೀಪ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಲಿದೆ. ಮುಂದಿನ 48 ಗಂಟೆಗಳಲ್ಲಿ ಇದು ಪಶ್ಚಿಮ-ವಾಯುವ್ಯಕ್ಕೆ ಚಲಿಸಿ ಬಂಗಾಳ ಕೊಲ್ಲಿಯ ನೈಋತ್ಯ ದಿಕ್ಕಿನತ್ತ ಸಾಗಲಿದೆ.

ಜಮ್ಮು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ ಸುಮಾರು 3.1 ಕಿಲೋ ಮೀಟರ್‌ನಿಂದ 5.8 ಕಿಲೋ ಮೀಟರ್ ಎತ್ತರದವರೆಗೆ ವ್ಯಾಪಿಸಿದೆ. ಇನ್ನೊಂದೆಡೆ ಉತ್ತರ ಭಾರತದ ಸಮುದ್ರ ಮಟ್ಟದಿಂದ 12.6 ಕಿಲೋ ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿದೆ. ಪ್ರತಿ ಗಂಟೆಗೆ 130 ಕಿಲೋ ಮೀಟರ್ ವೇಗದ ಗಾಳಿ ಬೀಸಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶಕ್ಕೆ ಹೊಂದಿಕೊಂಡು ಭಾರತದ ತ್ರಿಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಂಡಮಾರುತ ಪರಿಚಲನೆ ಕಂಡು ಬಂದಿದೆ. ಇದು ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದಲ್ಲಿ ಕೇಂದ್ರೀಕೃತವಾಗಿದೆ. ಅರಬ್ಬಿ ಸಮುದ್ರ ಪೂರ್ವ ಭಾಗ ಲಕ್ಷದ್ವೀಪ ಪ್ರದೇಶದ ಭಾಗದಲ್ಲೊಂದು ಚಂಡಮಾರುತ ಪರಿಚಲನೆಯು ಸಮುದ್ರ ಮಟ್ಟದಿಂದ 3.1 ಕಿಮೀ ಎತ್ತರದಲ್ಲಿದ್ದು, ಅದು ದುರ್ಬಲಗೊಂಡಿದೆ.
ಈ ಭಾಗದಲ್ಲಿ ಮಳೆ ಬರುವ ನಿರೀಕ್ಷೆ
ಇದೆಲ್ಲ ಕಾರಣಗಳಿಂದ ಉತ್ತರ ಭಾರತ ಕಡೆಗೆ ತೀವ್ರ ಚಳಿ, ದಟ್ಟ ಮಂಜು ಪ್ರಮಾಣದಲ್ಲಿ ಏರಿಕೆ ಆಗಿದೆ. ಮುಂದಿನ ಮೂರು ದಿನ ಇದೇ ವಾತಾವರಣ ಮುಂದುವರಿಯಲಿದೆ. ಮತ್ತೊಂದೆಡೆ ಪಾಂಡಿಚೇರಿ, ಚೆನ್ನೈ, ತಮಿಳುನಾಡು, ಕೇರಳ ಭಾಗದ ಕೆಲವೆಡೆ ಮಳೆ ಬರುವ ನಿರೀಕ್ಷೆ ಇದೆ ಎಂದು ಐಎಂಡಿ ಬುಧವಾರ ಮುನ್ಸೂಚನೆ ನೀಡಿದೆ.
ಹವಾಮಾನ ವರದಿ ಪ್ರಕಾರ, ಛತ್ತೀಸ್‌ಗಢ, ಚಂಡೀಗಢ, ದೆಹಲಿ, ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ, ಹರಿಯಾಣ, ಜಾರ್ಖಂಡ್, ಒಡಿಶಾ ಹಾಗೂ ಪಂಜಾಬ್‌ನ ಹಲವೆಡೆ ಶೀತ ಅಲೆಯ ಪರಿಸ್ಥಿತಿ ಮುಂದಿನ ಮೂರು ಮುಂದುವರಿಯಲಿದೆ. ಈ ರಾಜ್ಯಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ-ಸಿಕ್ಕಿಂ ಹಾಗೂ ಪಶ್ಚಿಮ ರಾಜಸ್ಥಾನದ ಕೆಲ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ತೀವ್ರ ಇಳಿಕೆ ಆಗಲಿದ್ದು, ಚಳಿ ಹೆಚ್ಚಾಗಲಿದೆ.
ಅಸ್ಸಾಂ ಮತ್ತು ಮೇಘಾಲಯ ಹಾಗೂ ಉತ್ತರಾಖಂಡದ ಕೆಲವೆಡೆ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಮೇಘಾಲಯ, ಬಿಹಾರ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ-ಲಡಾಖ್ ಪ್ರದೇಶಗಳು, ಮಧ್ಯಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಒಡಿಶಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ-ಸಿಕ್ಕಿಂ ಭಾಗಗಳಲ್ಲಿ ದಟ್ಟ ಮಂಜಿನ ವಾತಾವರಣ ನಿರ್ಮಾಣವಾಗಲಿದೆ. ದೆಹಲಿ ರಾಜ್ಯದಲ್ಲಿ ಅತೀವ ಚಳಿ ಜೊತೆಗೆ ಕಳಪೆ ಗುಣಮಟ್ಟದ ಗಾಳಿ ದಾಖಲಾತಿ ಮುಂದುವರಿದಿದೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಭಾಗದಲ್ಲಿ ಮಳೆ ನಿರೀಕ್ಷೆ ಇದೆ. ಕರ್ನಾಟಕ, ಕೇರಳ ಹಾಗೂ ಇತರ ರಾಜ್ಯಗಳ ಹಲವೆಡೆ ಹಗಲು ಒಣಹವೆ, ರಾತ್ರಿ ಮತ್ತು ಬೆಳಗ್ಗೆ ಅಧಿಕ ಚಳಿ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications