India Weather ಸೈಕ್ಲೋನ್ ಪ್ರಭಾವ: ಈ ಭಾಗಗಳಲ್ಲಿ ಧಾರಾಕಾರ ಮಳೆ, ರೆಡ್ & ಆರೆಂಜ್ ಅಲರ್ಟ್ ಘೋಷಿಸಿದ ಐಎಂಡಿ!
India Weather: ಭಾರತದಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಕರ್ನಾಟಕ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದು ಹಾಗೂ ಮಾನ್ಸೂನ್ ಬಿರುಗಾಳಿ ಮುಂದುವರಿದಿರುವುದರಿಂದ ದೇಶದ ಹಲವು ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಲ್ಲದೇ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗದಲ್ಲಿ ರಣಭೀಕರ ಮಳೆ ಮುಂದುವರಿದಿದೆ. ಪ್ರವಾಹದಿಂದ ಉತ್ತರ ಭಾರತದ ವಿವಿಧ ಭಾಗದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಉತ್ತರ ಭಾರತದ ಹಿಮಾಚಲ ಪ್ರದೇಶ, ಪಂಜಾಬ್ ರಾಜ್ಯದ ವಿವಿಧ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಆರ್ಭಟ ತುಸು ಇಳಿಕೆಯಾಗಿದೆ. ಮುಂದಿನ 6 ರಿಂದ 7 ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಆಗಸ್ಟ್ 29 ರಿಂದ ಆಗಸ್ಟ್ 31 ರವರೆಗೆ ರಾಜಸ್ಥಾನ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಪ್ರವಾಹದಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ನೀರಿನ ಪ್ರವಾಹ ಈಗಷ್ಟೇ ಇಳಿಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅಪಘಾತಗಳಿಂದ ಸಾವನ್ನಪ್ಪಿದವರ ಸಂಖ್ಯೆ 300 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಅವಘಡಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಆಗಿದೆ. ಇನ್ನು ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ಹಾನಿಗೊಳಗಾಗಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇನ್ನು ದೆಹಲಿಯಲ್ಲಿ ಮಳೆ ಇಲ್ಲ. ಮಹಾರಾಷ್ಟ್ರ ಮುಂಬೈ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಹಾರಾಷ್ಟ್ರದ ಮುಂಬೈ ಉಪನಗರ, ಮುಂಬೈ ನಗರ, ನಂದೂರ್ಬಾರ್, ಥಾಣೆ, ರಾಯಗಢ, ಪುಣೆ, ಸಿಂಧುದುರ್ಗ, ಕೊಲ್ಹಾಪುರ, ಸೋಲಾಪುರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಹಲವು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಯೆಲ್ಲೋ ಅಲರ್ಟ್ ಮುಂದುವರಿದಿದೆ.
ದಕ್ಷಿಣ ಭಾರತದಲ್ಲಿ ಮಳೆ ಆರ್ಭಟ: ಇನ್ನು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಕರ್ನಾಟಕದ ಕರಾವಳಿ ಭಾಗ, ಕೇರಳ ಹಾಗೂ ತೆಲಂಗಾಣದಲ್ಲಿ ಮಳೆ ಮುಂದುವರಿದಿದೆ. ಕೇರಳದ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್ ಹಾಗೂ ವಯನಾಡಿನಲ್ಲಿ ಭಾರೀ ಮಳೆ ಆಗುತ್ತಿದ್ದು ಈ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದ್ದು ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ ಭಾಗದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.












Click it and Unblock the Notifications