CBSE ವೆಬ್‌ಸೈಟ್ ದೋಷ ಪತ್ತೆಹಚ್ಚಿದ್ದ 19 ವರ್ಷದ ಯುವಕನಿಗೆ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಬಂಪರ್ ಉದ್ಯೋಗ
ನಿಸರ್ಗ ಅಧಿಕಾರಿ, 19 ವರ್ಷದ ಸೈಬರ್ ಸೆಕ್ಯುರಿಟಿ ತಜ್ಞ, ಈಗ ಕಾನ್ಪುರದ ಐಐಟಿಯ ಪ್ರತಿಷ್ಠಿತ ಸಿ3ಐಹಬ್ ನಲ್ಲಿ ಕೆಲಸ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಸಿಬಿಎಸ್‌ಇ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಲ್ಲಿನ ದೋಷಗಳನ್ನು ಪತ್ತೆಹಚ್ಚಿ ದೇಶಾದ್ಯಂತ ಸುದ್ದಿಯಾಗಿದ್ದ ಈ ಯುವಕನಿಗೆ ಇದೀಗ ಅತಿದೊಡ್ಡ ಅವಕಾಶ ಒದಗಿ ಬಂದಿದೆ.
ನಿಸರ್ಗ ಅಧಿಕಾರಿ ಅವರನ್ನು ಐಐಟಿ ಕಾನ್ಪುರದ 'ಓಪನ್ ಸೋರ್ಸ್ ಇಂಟೆಲಿಜೆನ್ಸ್ ಮತ್ತು ಥ್ರೆಟ್ ಇಂಟೆಲಿಜೆನ್ಸ್ ಎಂಜಿನಿಯರ್' ಆಗಿ ನೇಮಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ, ಸಿಬಿಎಸ್‌ಇ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಡಿಜಿಟಲ್ ಲೋಪಗಳನ್ನು ಇವರು ಬಹಿರಂಗಪಡಿಸಿದ್ದರು. ಈ ಲೋಪಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ವಿದ್ಯಾರ್ಥಿಗಳ ಅಂಕಗಳನ್ನು ಬದಲಾಯಿಸುವ ಅಥವಾ ಪರೀಕ್ಷಾ ಪೇಪರ್‌ಗಳನ್ನು ಲೀಕ್ ಮಾಡುವ ಅಪಾಯವಿತ್ತು. ಆದರೆ, ನಿಸರ್ಗ ಅವರು ಈ ದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಬದಲು, ಜವಾಬ್ದಾರಿಯುತವಾಗಿ ಫೆಬ್ರವರಿ 2026 ರಲ್ಲಿಯೇ CERT-In ಗೆ ವರದಿ ಮಾಡಿದ್ದರು.

ಮೇ 2026ರಲ್ಲಿ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ವಿವರವಾಗಿ ಬರೆದುಕೊಂಡ ನಂತರ, ಈ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿಗಳನ್ನು ಗಮನಿಸಿದ ಐಐಟಿ ಕಾನ್ಪುರದ ನಿರ್ದೇಶಕ ಮಣೀಂದ್ರ ಅಗರ್‌ವಾಲ್ ಅವರು ನೇರವಾಗಿ ನಿಸರ್ಗ ಅವರನ್ನು ಸಂಪರ್ಕಿಸಿ ಈ ಉದ್ಯೋಗದ ಅವಕಾಶವನ್ನು ನೀಡಿದ್ದಾರೆ. ನಮ್ಮ ಸೈಬರ್ ಭದ್ರತಾ ತಂಡದಲ್ಲಿ ನಿಸರ್ಗ ಅವರನ್ನು ಎಂಜಿನಿಯರ್ ಆಗಿ ನೇಮಿಸಲಾಗಿದೆ, ಅವರು ಸಂಸ್ಥೆ ನೇಮಿಸಿಕೊಂಡ ಅತ್ಯಂತ ಕಿರಿಯ ಎಂಜಿನಿಯರ್‌ಗಳಲ್ಲಿ ಒಬ್ಬರು ಎಂದು ಮಣೀಂದ್ರ ಅಗರ್‌ವಾಲ್ ಸ್ಪಷ್ಟಪಡಿಸಿದ್ದಾರೆ.
ಹೊಸ ಹುದ್ದೆಯಲ್ಲಿ ನಿಸರ್ಗ ಅವರ ಕೆಲಸವೇನು?
ಐಐಟಿ ಕಾನ್ಪುರದ ತಂತ್ರಜ್ಞಾನ ನಾವೀನ್ಯತೆ ಕೇಂದ್ರವಾದ ಸಿ3ಐಹಬ್‌ನಲ್ಲಿ, ನಿಸರ್ಗ ಅವರು ಸೈಬರ್ ಭದ್ರತೆಯ ಅತ್ಯಂತ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡಲಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ವಿಶ್ಲೇಷಿಸುವುದು, ಸೈಬರ್ ಬೆದರಿಕೆಗಳನ್ನು ಮುಂಚಿತವಾಗಿ ಪತ್ತೆಹಚ್ಚುವುದು ಹಾಗೂ ವಿವಿಧ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಗಳಲ್ಲಿರುವ ಭದ್ರತಾ ಲೋಪಗಳನ್ನು ಹುಡುಕಿ, ಅವುಗಳನ್ನು ಸರಿಪಡಿಸಲು ಸಹಾಯ ಮಾಡುವುದು ಇವರ ಪ್ರಮುಖ ಜವಾಬ್ದಾರಿಯಾಗಿದೆ. ಈ ಹೊಸ ಜವಾಬ್ದಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿಸರ್ಗ, "ಮೊದಲ ಬಾರಿಗೆ ನಾನು ಸಂಪೂರ್ಣವಾಗಿ ಸೈಬರ್ ಸೆಕ್ಯುರಿಟಿ ಆಧಾರಿತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ" ಎಂದು ಹೇಳಿಕೊಂಡಿದ್ದಾರೆ.
ಸಿಬಿಎಸ್‌ಇ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಲ್ಲಿನ ದೋಷಗಳು
ಸಿಬಿಎಸ್‌ಇಯ ಡಿಜಿಟಲ್ ಮೂಲಸೌಕರ್ಯದಲ್ಲಿ ಹಲವು ಗಂಭೀರ ಲೋಪಗಳಿವೆ ಎಂದು ನಿಸರ್ಗ ಅವರು ತಮ್ಮ ಬ್ಲಾಗ್‌ನಲ್ಲಿ ತಿಳಿಸಿದ್ದರು. ಸರಿಯಾಗಿ ಸಂರಚಿಸದ ಅಮೆಜಾನ್ ವೆಬ್ ಸರ್ವೀಸಸ್ ಸ್ಟೋರೇಜ್ ಬಕೆಟ್‌ನಿಂದಾಗಿ 2026ರ ಸಾಲಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮತ್ತು ಪ್ರಶ್ನೆಪತ್ರಿಕೆಗಳು ಯಾವುದೇ ಅಥೆಂಟಿಕೇಶನ್ ಇಲ್ಲದೆ ಸಾರ್ವಜನಿಕರಿಗೆ ಸಿಗುವಂತಾಗಿತ್ತು ಎಂದು ಅವರು ಆರೋಪಿಸಿದ್ದರು. ಮೌಲ್ಯಮಾಪಕರ ಖಾತೆಗಳಿಗೆ ಪ್ರವೇಶ ಕಲ್ಪಿಸಬಹುದಾದ 'ಮಾಸ್ಟರ್ ಪಾಸ್‌ವರ್ಡ್' ಕೂಡ ಸುಲಭವಾಗಿ ಲಭ್ಯವಿತ್ತು ಎಂದು ಅವರು ಎಚ್ಚರಿಸಿದ್ದರು.
ಯುವ ಪ್ರತಿಭೆಗಳಿಗೆ ಸ್ಫೂರ್ತಿ
ಇಂದಿನ ಡಿಜಿಟಲ್ ಯುಗದಲ್ಲಿ ಡೇಟಾ ಕಳವು, ಹ್ಯಾಕಿಂಗ್ ಮತ್ತು ಸೈಬರ್ ದಾಳಿಗಳು ಹೆಚ್ಚಾಗುತ್ತಿರುವಾಗ, ಸೈಬರ್ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಿಸರ್ಗ ಅವರು ಕಾರ್ಯನಿರ್ವಹಿಸಲಿರುವ 'ಓಪನ್ ಸೋರ್ಸ್ ಇಂಟೆಲಿಜೆನ್ಸ್' ವಿಭಾಗವು ಸೈಬರ್ ದಾಳಿಗಳನ್ನು ನಡೆಯುವ ಮುನ್ನವೇ ಊಹಿಸಿ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕೇವಲ 19ನೇ ವಯಸ್ಸಿಗೆ ಭಾರತದ ಅತ್ಯುನ್ನತ ತಂತ್ರಜ್ಞಾನ ಸಂಸ್ಥೆಯಾದ ಐಐಟಿಯ ಸೈಬರ್ ಭದ್ರತಾ ತಂಡದ ಭಾಗವಾಗಿರುವುದು ಅಸಾಮಾನ್ಯ ಸಾಧನೆಯಾಗಿದೆ. ನಿಸರ್ಗ ಅವರ ಈ ಪಯಣವು ಕೇವಲ ಪದವಿಗಿಂತಲೂ ಪ್ರಾಕ್ಟಿಕಲ್ ಕೌಶಲ್ಯ, ಸಮಸ್ಯೆಗಳನ್ನು ಗುರುತಿಸುವ ಬುದ್ಧಿಮತ್ತೆ ಮತ್ತು ನೈತಿಕತೆಗೆ ಎಷ್ಟೊಂದು ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ನಿಸರ್ಗ ಅವರ ಸಾಧನೆ ಹೊಸ ದಾರಿದೀಪವಾಗಿದೆ.












Click it and Unblock the Notifications