ಏನ್ ಸರ್ ರಸ್ತೆಗುಂಡಿ ಅಂದ್ರೆ: "ಸಾಕು ಸುಮ್ನಿರ್‍ರಿ ಆಕ್ಸಿಡೆಂಟ್ ಕಡಿಮೆ ಆಗುತ್ತೆ" ಎಂದ ಬಿಜೆಪಿ ಸಂಸದ! Viral Video
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ರಸ್ತೆಗುಂಡಿಗಳ ಸಂಖ್ಯೆ ಈ ವರ್ಷ ವಿಪರೀತವಾಗಿವೆ. ಅಲ್ಲದೇ ಈ ಬಾರಿ ಹೆಚ್ಚು ರಸ್ತೆಗುಂಡಿಗಳು ಸೃಷ್ಟಿಯಾಗಿದ್ದು ಇದರಿಂದ ಬೆಂಗಳೂರು ಸೇರಿದಂತೆ ದೇಶದಾದ್ಯಂತ ರಸ್ತೆಗುಂಡಿಗಳಿಂದ ಜನ ಸಾವನ್ನಪ್ಪುತ್ತಿದ್ದಾರೆ. ಹಲವರು ರಸ್ತೆಗುಂಡಿ ಕಾರಣಕ್ಕೆ ಗಂಭೀರವಾಗಿ ಗಾಯಗೊಂಡಿರುವುದು ಸಹ ಇದೆ. ಆದರೆ, ಇದೀಗ ಬಿಜೆಪಿ ಸಂಸದರೊಬ್ಬರು ರಸ್ತೆಗುಂಡಿಯಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇಲ್ಲದಿದ್ದರೆ ಈ ವೇಳೆಗಾಗಲೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿತ್ತು ಎಂದಿದ್ದು. ಈ ವಿಡಿಯೋ ವೈರಲ್ ಆಗಿದೆ. ಸಹಜವಾಗಿಯೇ ಇದಕ್ಕೆ ಜನರೂ ಸಹ ಸರಿಯಾಗಿಯೇ ರಿಯಾಕ್ಟ್ ಮಾಡಿದ್ದಾರೆ.
ಕೆಟ್ಟ ರಸ್ತೆಗಳು ಕಡಿಮೆ ಅಪಘಾತಗಳನ್ನುಂಟು ಮಾಡುತ್ತವೆ (ಕೆಟ್ಟ ರಸ್ತೆಗಳಿಂದ ಅಪಘಾತ ಆಗುವುದು ಕಡಿಮೆ ಆಗುತ್ತವೆ) ಎಂದು ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಅವರು ಹೇಳಿದ್ದು ಅವರು ಮಾತನಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಲಂಗಾಣದ ಹಿಂದಿನ ಬಿಆರ್‌ಎಸ್ ಸರ್ಕಾರವು ಈ ಹಿಂದೆ ಉತ್ತಮ ಹಾಗೂ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಿತ್ತು ಎನ್ನಲಾಗಿದ್ದು, ಇದಕ್ಕೂ ಸಂಸದರು ಟೀಕಿಸಿದ್ದಾರೆ.

ರಂಗಾ ರೆಡ್ಡಿ ಅವರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ ಜಲ್ಲಿ ತುಂಬಿದ ಟಿಪ್ಪರ್ ಲಾರಿ ಮತ್ತು ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು 19 ಜನ ಮೃತಪಟ್ಟಿದ್ದಾರೆ. ಅಲ್ಲದೇ ಈ ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಸಂಸದರು ಎಡವಟ್ಟು ಮಾಡಿಕೊಂಡಿದ್ದಾರೆ. ಇವರ ಹೇಳಿಕೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿದ್ದರೆ ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಕಡಿಮೆ ಅಪಘಾತಗಳು ಸಂಭವಿಸುತ್ತವೆ. ರಸ್ತೆಗಳು ಉತ್ತಮವಾಗಿದ್ದಷ್ಟೂ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತವೆ. ಅಲ್ಲದೇ ಹೆಚ್ಚೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇಲ್ಲಿನ ಚೆವೆಲ್ಲಾ ರಸ್ತೆಯನ್ನು ನಿಜಾಮ್ ಯುಗದಲ್ಲಿ ನಿರ್ಮಿಸಲಾಯಿತು. ನಂತರ ಆಡಳಿತಗಾರರು ಬೇಸಿಗೆಯ ಸಮಯದಲ್ಲಿ ಅನಂತಗಿರಿ ಬೆಟ್ಟಗಳಿಗೆ ಹೋಗಲು ಇದನ್ನು ಬಳಸುತ್ತಿದ್ದರು. ಅದೇ ವಕ್ರ ರಸ್ತೆ - ಕೆಟ್ಟ ಸ್ಥಿತಿಯಲ್ಲಿದ್ದರೂ ಇನ್ನೂ ಬಳಸಲಾಗುತ್ತಿದೆ. ಮೊದಲ ಬಾರಿಗೆ ಸಂಸದರಾದಾಗ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗಿನ ಬಿಆರ್‌ಎಸ್ ಸರ್ಕಾರವನ್ನು ವಿನಂತಿಸಿದರು ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಅದು ಆಗಲಿಲ್ಲ. ನಂತರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವಂತೆ ಮನವಿ ಮಾಡಿದ್ದೆ. 2016 ರಲ್ಲಿ ಇದು ಹೆದ್ದಾರಿಯಾಯಿತು ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.
ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿ ಜೊತೆಗೆ ಘೋಷಿಸಲಾದ ಇತರ ಎಂಟು ರಾಷ್ಟ್ರೀಯ ಹೆದ್ದಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ರೆಡ್ಡಿ ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ: ಇನ್ನು ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಲವರು ಕೊಂಡ ವಿಶ್ವೇಶ್ವರ ರೆಡ್ಡಿ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಅಲ್ಲದೇ ದೇಶದ ಹೆದ್ದಾರಿಗಳು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ರಸ್ತೆಗಳು ಯಾವ ಕಾರಣಕ್ಕೆ ಈ ರೀತಿ ಆಗವೆ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಂತಾಗಿದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.












Click it and Unblock the Notifications