ಬೊಂಬಾಟ್ ಸುದ್ದಿ: ಕೊರೊನಾವೈರಸ್ ವಿರುದ್ಧ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮಿಶ್ರಣವೇ ಬೆಸ್ಟ್!
ನವದೆಹಲಿ, ಆಗಸ್ಟ್ 10: ಜಗತ್ತಿನಾದ್ಯಂತ ಕೊರೊನಾವೈರಸ್ ಅಲೆಗಳ ನಡುವೆ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ ಎನ್ನುವ ಪ್ರಶ್ನೆಗೆ ಸಂಶೋಧಕರು ಉತ್ತರ ಹುಡುತ್ತಲೇ ಇದ್ದಾರೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಸಮ್ಮಿಶ್ರವು ಒಂದೇ ಲಸಿಕೆಯ ಎರಡು ಡೋಸ್ ಗಿಂತ ಹೆಚ್ಚು ಪ್ರಭಾವಶಾಲಿ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು 98 ಜನರನ್ನೊಳಗೊಂಡಂತೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. 18 ಜನರ ಮೇಲೆ ನಡೆಸಿದ ವೈದ್ಯಕೀಯ ಪ್ರಯೋಗದಲ್ಲಿ ಒಂದೇ ಮಾದರಿಯ ಎರಡು ಡೋಸ್ ಪಡೆದುಕೊಳ್ಳುವುದಕ್ಕಿಂತ ಮೊದಲು ಕೊವಿಶೀಲ್ಡ್ ಲಸಿಕೆಯ ಒಂದು ಡೋಸ್ ಮತ್ತು ಎರಡನೇ ಬಾರಿಗೆ ಕೊವ್ಯಾಕ್ಸಿನ್ ಲಸಿಕೆಯ ಡೋಸ್ ಪಡೆದುಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂಬುದು ವೈದ್ಯಕೀಯ ಸಂಶೋಧನೆಯಲ್ಲಿ ತಿಳಿದು ಬಂದಿದೆ.
Recommended Video

ಒಂದೇ ಮಾದರಿಯ ಎರಡು ಡೋಸ್ ಲಸಿಕೆಯನ್ನು ಪಡೆದವರು ಹಾಗೂ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲಾಗಿತ್ತು. ಈ ವೇಳೆ ಮೊದಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಸಂಶೋಧಿಸಿದ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ನಂತರ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರಲ್ಲಿಯೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ವೈದ್ಯಕೀಯ ಅಧ್ಯಯನದಿಂದ ತಿಳಿದು ಬಂದಿದೆ. ಎರಡು ವಿಭಿನ್ನ ಲಸಿಕೆಯ ಡೋಸ್ ಪಡೆದುಕೊಂಡಿರುವುದರ ಬಗ್ಗೆ ನಡೆಸಿದ ಪ್ರಯೋಗದ ಫಲಿತಾಂಶ, ದೇಶದಲ್ಲಿ ಲಸಿಕೆ ಪಡೆದುಕೊಂಡವರ ಸಂಖ್ಯೆ ಹಾಗೂ ಕೊವಿಡ್-19 ಏರಿಳಿತದ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಭಿನ್ನ ಮಾದರಿ ಲಸಿಕೆ ಪಡೆಯುವಿಕೆಯ ಪರಿಣಾಮ ಹೇಗಿದೆ?
ಉತ್ತರ ಪ್ರದೇಶದಲ್ಲಿ 'ಕೊವಿಡ್-19 ಲಸಿಕೆ ಪ್ರಾಸಂಗಿಕ ಸಮ್ಮಿಶ್ರಣ' ಎಂಬ ಹೆಸರಿನಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಯಿತು. ಎರಡು ವಿಭಿನ್ನ ಮಾದರಿಯ ಲಸಿಕೆಯನ್ನು ನೀಡುವುದರ ಮೂಲಕ ಅದರಿಂದ ಆಗುವ ವೈದ್ಯಕೀಯ ಪರಿಣಾಮ ಮತ್ತು ಸುರಕ್ಷತೆಯ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು. "ನಮಗೆ ತಿಳಿದಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ, ಭಾರತದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮತ್ತು ರೋಗಾಣುಗಳನ್ನು ನಿಷ್ಕ್ರಿಯಗೊಳಿಸುವ ಎರಡು ಲಸಿಕೆಗಳ ಸಮ್ಮಿಶ್ರಣದ ಪ್ರಯೋಗ ಮೊದಲ ಬಾರಿಗೆ ನಡೆಸಲಾಗುತ್ತಿದೆ, ಎಂದು ಸಂಶೋಧಕರು ಹೇಳಿದ್ದಾರೆ.

ಭಾರತದಲ್ಲಿ ಎರಡು ಮಾದರಿ ಲಸಿಕೆಗಳ ವಿತರಣೆ
ದೇಶದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಎರಡು ಮಾದರಿಯ ಲಸಿಕೆಗಳನ್ನು ವಿತರಿಸುವುದಕ್ಕೆ ಆರಂಭಿಸಲಾಗಿದೆ. ಅಡೆನೋವೈರಸ್ ವೆಕ್ಟರ್ ಆಧಾರಿತ ಲಸಿಕೆ ಆಗಿರುವ ಕೊವಿಶೀಲ್ಡ್ ಮತ್ತು ರೋಗಾಣುಗಳನ್ನು ನಿಷ್ಕ್ರಿಯಗೊಳಿಸುವ ಮಾದರಿಯ ಲಸಿಕೆಗಳ ಸಮ್ಮಿಶ್ರಣದ ಪ್ರಯೋಗವನ್ನು ನಡೆಸಲಾಯಿತು. ಈ ಹಿಂದೆ ಅಮೆರಿಕಾದಲ್ಲಿ 1971 ರಿಂದ 1999ರವರೆಗೂ ಅಡೆನೋವೈರಸ್ ವಿರುದ್ಧ ಹೋರಾಡುವುದಕ್ಕೆ ಈ ಲಸಿಕೆಯನ್ನು ನೀಡಲಾಗುತ್ತಿತ್ತು. ಆದರೆ ಅಮೆರಿಕಾದಲ್ಲಿ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದ್ದರಿಂದ ಈ ಲಸಿಕೆಯ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ವಿಭಿನ್ನ ಮಾದರಿ ಲಸಿಕೆಗಳ ಮೂಲಕ ವೈದ್ಯಕೀಯ ಪ್ರಯೋಗ
ಉತ್ತರ ಪ್ರದೇಶದ ಸಿದ್ದಾರ್ಥ್ ನಗರದಲ್ಲಿ ನಡೆದ ರಾಷ್ಟ್ರೀಯ ಯೋಜನೆಯಲ್ಲಿ 18 ಮಂದಿಯ ಮೇಲೆ ವೈದ್ಯಕೀಯ ಪ್ರಯೋಗ ನಡೆಸಲಾಯಿತು. ಈ 18 ಜನರಿಗೆ ಮೊದಲ ಬಾರಿ ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು. ತದನಂತರದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಯಿತು. ದೇಶದಲ್ಲಿ ಕೊವಿಡ್-19 ಲಸಿಕೆಯ ವಿತರಣೆ ಅಭಿಯಾನ ಆರಂಭವಾಗಿ 204 ದಿನಗಳು ಪೂರ್ಣಗೊಂಡಿವೆ. ಈ ಹಂತದಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ತೆಗೆದುಕೊಳ್ಳುವುದರಿಂದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಇದರ ಬೆನ್ನಲ್ಲೇ ಎರಡು ವಿಭಿನ್ನ ಮಾದರಿ ಲಸಿಕೆಗಳ ವಿತರಣೆಯ ಪ್ರಭಾವ ಮತ್ತು ಸುರಕ್ಷತೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 98 ಮಂದಿಯ ಮೇಲೆ ವೈದ್ಯಕೀಯ ಪ್ರಯೋಗವನ್ನು ನಡೆಸಲಾಯಿತು. 98 ಜನರ ಪೈಕಿ 40 ಜನರಿಗೆ ಎರಡು ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಹಾಗೂ 40 ಜನರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಯಿತು. ಇನ್ನುಳಿದ 18 ಜನರಿಗೆ ಮಾತ್ರ ಮೊದಲಿಗೆ ಕೊವಿಶೀಲ್ಡ್ ಲಸಿಕೆ ಹಾಗೂ ಎರಡನೇ ಬಾರಿ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿತ್ತು. 2021ರ ಮೇ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.

ವೈದ್ಯಕೀಯ ಪ್ರಯೋಗದಿಂದ ತಿಳಿದು ಬಂದ ಅಂಶವೇನು?
"ಮೊದಲು ಕೊವಿಶೀಲ್ಡ್ ನಂತರದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡ 18 ಜನರಲ್ಲಿನ ಸುರಕ್ಷತೆ ಹಾಗೂ ರೋಗ ನಿರೋಧಕರ ಶಕ್ತಿ ಮತ್ತು ಪರಿಣಾಮದ ಮೇಲೆ ಲಕ್ಷ್ಯ ವಹಿಸಿದ್ದೇವು. ಮೂರು ವರ್ಗಗಳಲ್ಲಿ ನೀಡಿರುವ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಕಂಡುಕೊಳ್ಳಲಾಗಿದೆ. ಆಲ್ಫಾ, ಬೇಟಾ, ಡೆಲ್ಟಾ ರೂಪಾಂತರ ತಳಿಗಳ ವಿರುದ್ಧ ಹೆಚ್ಚು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಹಾಗೂ ರೋಗಾಣುಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಒಂದೇ ಮಾದರಿಯ ಎರಡು ಡೋಸ್ ಲಸಿಕೆಗಿಂತಲೂ, ಎರಡು ವಿಭಿನ್ನ ಡೋಸ್ ಮಾದರಿಯ ಲಸಿಕೆಯು ಹೆಚ್ಚು ಪರಿಣಾಮಕಾರಿ," ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಅಡೆನೋವೈರಸ್ ಮಾದರಿಯ ಲಸಿಕೆ ಮತ್ತು ರೋಗಾಣು ನಿಷ್ಕ್ರಿಯಗೊಳಿಸುವ ಲಸಿಕೆಗಳ ಸಮ್ಮಿಶ್ರಣವು ಕೇವಲ ಪರಿಣಾಮಕಾರಿಯಷ್ಟೇ ಅಲ್ಲ. ಒಂದು ಮಾದರಿ ಲಸಿಕೆಗಿಂತ ಎರಡು ಮಾದರಿಯ ಲಸಿಕೆಯ ಸಮ್ಮಿಶ್ರಣವು ಹೆಚ್ಚು ಸುರಕ್ಷಿತವಾಗಿದೆ. ಇದರ ಜೊತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪೂರಕವಾಗಿದೆ," ಎಂದು ವೈದ್ಯಕೀಯ ಪ್ರಯೋಗದಿಂದ ತಿಳಿದು ಬಂದಿದೆ.

ಪ್ರತಿಕೂಲ ರಕ್ಷಣೆ ಲಸಿಕೆ ನಂತರ ಪ್ರತಿಕೂಲ ಘಟನೆಗಳ ಮೇಲೆ ನಿಗಾ
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ವಿತರಣೆ ನಂತರದಲ್ಲಿ ಎರಡು ಲಸಿಕೆಯ ಪ್ರತಿರಕ್ಷಣೆ ಕುರಿತು ವಿಶ್ಲೇಷಣೆ ನಡೆಸಲಾಯಿತು. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಲಸಿಕೆ ವಿತರಣೆ ಸಂದರ್ಭದಲ್ಲಿ ಪ್ರತಿಪಕ್ಷಣಾ ಪ್ರಮಾಣ ಮತ್ತು ಪ್ರತಿಕೂಲ ಪ್ರಭಾವಗಳ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಎರಡು ಡೋಸ್ ಲಸಿಕೆ ನೀಡುವ ಸಂದರ್ಭದಲ್ಲಿ ಲಸಿಕೆ ಪಡೆದ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸಿಕೊಂಡಿದೆ. ಇದರ ಹೊರತಾಗಿ ಯಾವುದೇ ಸ್ಥಳೀಯ ಎಇಎಫ್‌ಐಗಳಾದ ಎರಿಥೆಮಾ, ಇಂಟ್ರಕ್ಷನ್, ಪ್ರುರಿಟಿಸ್ ಅಥವಾ ಪಸ್ಟಲ್ ರಚನೆಯು ಯಾವುದೇ ಭಾಗವಹಿಸುವವರಿಂದ ದಾಖಲಾಗಿಲ್ಲ. ಉರ್ಟೇರಿಯಾ, ವಾಕರಿಕೆ, ವಾಂತಿ, ಆರ್ತ್ರಲ್ಜಿಯಾ ಅಥವಾ ಕೆಮ್ಮಿನಂತಹ ಯಾವುದೇ ವ್ಯವಸ್ಥಿತ ರೋಗದ ಬಗ್ಗೆ ವರದಿಯಾಗಿಲ್ಲ. ಲಸಿಕೆ ಪಡೆದುಕೊಂಡ ಮೂರರಿಂದ ನಾಲ್ಕು ದಿನಗಳವರೆಗೂ ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆರೋಗ್ಯ ಸಮಸ್ಯೆ ನಿವಾರಣೆಗೆ ಪ್ಯಾರಾಸಿಟಮಲ್ ನೀಡವುದಕ್ಕೆ ಸಲಹೆ ನೀಡಲಾಗಿದೆ.
ಎರಡು ಪ್ರತ್ಯೇಕ ಮಾದರಿಯ ಲಸಿಕೆಯನ್ನು ಎರಡು ವಿಭಿನ್ನ ವೇದಿಕೆಗಳಲ್ಲಿ ನೀಡುವುದರ ಮೂಲಕ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. ಈ ಲಸಿಕೆಗಳ ಸಮ್ಮಿಶ್ರಣವು ಒಂದೇ ಮಾದರಿಯ ಎರಡು ಡೋಸ್ ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದು ಈ ಪ್ರಯೋಗದಿಂದ ತಿಳಿದು ಬಂದಿದೆ.

mRNA ಮಾದರಿ ಲಸಿಕೆ ಎಂದರೆ ಅರ್ಥವೇನು?
ಭಾರತದಲ್ಲಿ ಅನುಮೋದನೆ ನೀಡಲಾಗಿರುವ ಕೊವ್ಯಾಕ್ಸಿನ್ ಲಸಿಕೆಯೊಂದರನ್ನು ಹೊರತುಪಡಿಸಿ ಉಳಿದ ಮೂರು ಲಸಿಕೆಗಳು mRNA ಮಾದರಿಯ ಲಸಿಕೆಗಳಾಗಿವೆ. ಕೊವಿಶೀಲ್ಡ್, ಸ್ಪುಟ್ನಿಕ್-ವಿ ಮತ್ತು ಮಾಡರ್ನಾ ಕಂಪನಿಯ ಲಸಿಕೆಗಳು mRNA ಮಾದರಿಯದ್ದಾಗಿವೆ. ಅಸಲಿಗೆ ಈ ಮಾದರಿಯ ಲಸಿಕೆಗಳು ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಲಾಗಿದೆ.

ಭಾರತದ ಆದ್ಯತೆ ಲಸಿಕೆ ವಿತರಣೆಯ ಮೇಲೆ ಹೆಚ್ಚಿದೆ
ದೇಶದಲ್ಲಿ ಎರಡೂ ಡೋಸ್ ಕೊರೊನಾವೈರಸ್ ಲಸಿಕೆ ಪಡೆದುಕೊಂಡವರ ಸಂಖ್ಯೆ ಶೇ.8ಕ್ಕಿಂತ ಕಡಿಮೆಯಾಗಿದೆ. ಈ ಹಂತದಲ್ಲಿ ನಾವು ಹೆಚ್ಚು ಜನರಿಗೆ ಲಸಿಕೆ ವಿತರಿಸುವ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಬೇಕಾಗಿದೆ. ಅಲ್ಲದೇ "ಎರಡು ಡೋಸ್ ಕೊವಿಡ್-19 ಲಸಿಕೆ ಪಡೆದುಕೊಂಡವರಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆ ಎಂಬುದಾಗಿ ಸೂಚಿಸುವ ಅಂಕಿ-ಅಂಶಗಳಿವೆ ಎಂದು ನನಗೆ ಅನ್ನಿಸುವುದಿಲ್ಲ," ಎಂದು ಕೊವಿಡ್-19 ಲಸಿಕೆ ವಿತರಣೆಯ ರಾಷ್ಟ್ರೀಯ ತಜ್ಞರ ತಂಡ ಸದಸ್ಯ ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸಮಿರನ್ ಪಾಂಡಾ ಹೇಳಿದ್ದಾರೆ.
"ದೇಶದಲ್ಲಿ ಯಾವ ವರ್ಗಕ್ಕೆ ಬೂಸ್ಟರ್ ಡೋಸ್ ನೀಡಬೇಕು ಮತ್ತು ಅದರ ಸಾಧ್ಯಾಸಾಧ್ಯತೆಗಳೇನುು ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮೊದಲು ಪರಿಶೋಧನೆ ನಡೆಸಬೇಕಾಗುತ್ತದೆ. ನಂತರದಲ್ಲಿ ಮೊದಲು ಲಸಿಕೆಯ ಡೋಸ್ ಪಡೆದುಕೊಂಡ ವೈದ್ಯಕೀಯ ಸಿಬ್ಬಂದಿಗೆ ಈ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆ. ಏಕೆಂದರೆ, ಅವರು ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡು ತಿಂಗಳುಗಳೇ ಕಳೆದು ಹೋಗಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಬಹುಪಾಲು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯು ಪೂರ್ಣ ಪ್ರಮಾಣದ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದಾಗ್ಯೂ, ಕೊರೊನಾವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ನೂರಾರು ವೈದ್ಯರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ," ಎಂದು ಪಾಂಡಾ ಉಲ್ಲೇಖಿಸಿದ್ದಾರೆ.

ಕೊವಿಡ್-19 ಲಸಿಕೆ ಪೂರೈಕೆ ಆಗಿದ್ದೆಷ್ಟು, ಬಳಸಿದ್ದೆಷ್ಟು?
2021ರ ಆಗಸ್ಟ್ 10ರ ಅಂಕಿ-ಅಂಶಗಳ ಪ್ರಕಾರ, 52,56,35,710 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 52,56,35,710
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 48,43,100
* ಬಳಕೆ ಆಗಿರುವ ಲಸಿಕೆ ಪ್ರಮಾಣ - 51,09,58,562
* ಕೊವಿಡ್-19 ಲಸಿಕೆಯ ಲಭ್ಯತೆ - 2,07,55,852

ದೇಶದಲ್ಲಿ ಇಳಿಮುಖವಾಯಿತು ಲಸಿಕೆ ವಿತರಣೆ ಪ್ರಮಾಣ
ಕಳೆದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 206 ದಿನಗಳೇ ಕಳೆದಿದ್ದು, ಕಳೆದ 24 ಗಂಟೆಗಳಲ್ಲಿ 51,09,58,562 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಮಂಗಳವಾರದ ವೇಳೆಗೆ ಒಟ್ಟು 52,56,35,710 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಯ ಶೇ.75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಕಂಪನಿಗಳಿಂದ ನೇರವಾಗಿ ಖರೀದಿಸುತ್ತದೆ. ಹೀಗೆ ಖರೀದಿಸಿದ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ.

ಭಾರತದಲ್ಲಿ ಕೊವಿಡ್-19 ಸೋಂಕಿತರ ಏರಿಳಿತದ ಅಂಕಿ-ಸಂಖ್ಯೆ
ದೇಶದಲ್ಲಿ 147 ದಿನಗಳಲ್ಲೇ ಮೊದಲ ಬಾರಿಗೆ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಸೋಮವಾರ ಒಂದು ದಿನ 28,204 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 41,511 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 373 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,28,682 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,19,98,158ಕ್ಕೆ ಏರಿಕೆಯಾಗಿದೆ. ಈವರೆಗೂ 3,11,80,968 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,06,822 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications