ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಪೋಷಕರ ವಿರುದ್ಧ ಎಫ್‌ಐಆರ್; ಪರಾರಿಯಾಗಿರುವ ದಂಪತಿ
ರೈತನಿಗೆ ಬೆದರಿಕೆ ಹಾಕಿದ್ದಕ್ಕಾಗಿ ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಮತ್ತು ಅವರ ಫೋನ್‌ಗಳನ್ನು ಸ್ವಿಚ್ ಆಫ್ ಆಗಿವೆ ಎಂದು ಪುಣೆ ಗ್ರಾಮಾಂತರ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿಗಳು ಪರಾರಿಯಾಗಿದ್ದಾರೆ. ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಆದರೆ ಅವರ ಫೋನ್‌ಗಳು ಸ್ವಿಚ್ ಆಫ್ ಆಗಿರುವುದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಾವು ಅವರ ಮನೆಯನ್ನು ಶೋಧಿಸಿದ್ದೇವೆ, ಆದರೆ ಅವರು ಅಲ್ಲಿ ಇರಲಿಲ್ಲ ಎಂದು ಪುಣೆ ಗ್ರಾಮಾಂತರ ಎಸ್ಪಿ ಪಂಕಜ್ ದೇಶಮುಖ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪೊಲೀಸ್ ತಂಡಗಳು ಖೇಡ್ಕರ್ ಅವರ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಹೇಳಿದ್ದಾರೆ. ಸ್ಥಳೀಯ ಅಪರಾಧ ವಿಭಾಗ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳು ಸೇರಿದಂತೆ ಹಲವಾರು ತಂಡಗಳು ಪುಣೆ ಮತ್ತು ಹತ್ತಿರದ ಸ್ಥಳಗಳಲ್ಲಿ ಕೆಲವು ತೋಟದ ಮನೆಗಳು ಮತ್ತು ನಿವಾಸಗಳಲ್ಲಿ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಪತ್ತೆಯಾದ ಬಳಿಕ ವಿಚಾರಣೆ ಮಾಡುವುದಾಗಿ ತಿಳಿಸಿದರು.
ಏಳು ಜನರ ವಿರುದ್ಧ ಪ್ರಕರಣ
ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಅವರು ಬೆದರಿಕೆ ಹಾಕಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮನೋರಮಾ ಮತ್ತು ದಿಲೀಪ್ ಖೇಡ್ಕರ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನಲ್ಲಿ ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ತಾಯಿ ಬಂದೂಕು ತೋರಿಸುತ್ತಾ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರ ಪ್ರಕಾರ, ವೀಡಿಯೋವನ್ನು ಜೂನ್ 2023 ರಲ್ಲಿ ರೆಕಾರ್ಡ್ ಮಾಡಲಾಗಿದೆ.
ತನಿಖೆಯ ನಂತರ, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 504, 506, 143, 144, 147, 148, ಮತ್ತು 149 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 (25) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆತ್ಮರಕ್ಷಣೆಗಾಗಿ ವೀಡಿಯೊದಲ್ಲಿ ಕಂಡುಬರುವ ಗನ್ ಅನ್ನು ಬಳಸಲಾಗಿದೆ ಎಂದು ಕುಟುಂಬವು ತಮ್ಮ ವಕೀಲರ ಮೂಲಕ ಹೇಳಿದೆ. ಅವರ ಬಳಿ ಇರುವ ಗನ್‌ಗೆ ಲೈಸೆನ್ಸ್ ಕೂಡ ಇದೆ ಎಂದು ಹೇಳಿದ್ದಾರೆ.












Click it and Unblock the Notifications