IAS: 57 ಬಾರಿ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ನಿವೃತ್ತಿ!
ನವದೆಹಲಿ, ಏಪ್ರಿಲ್ 30: ದೇಶದ ಪ್ರಸಿದ್ಧ ಐಎಎಸ್ ಅಧಿಕಾರಿಯೊಬ್ಬರು ಬುಧವಾರ ನಿವೃತ್ತಿ ಹೊಂದುತ್ತಿದ್ದಾರೆ. ಸುಮಾರು 34 ವರ್ಷಗಳ ಸೇವೆಯಲ್ಲಿ 57 ಬಾರಿ ವರ್ಗಾವಣೆಗೊಂಡಿರುವ 1991ನೇ ಬ್ಯಾಚ್ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಏಪ್ರಿಲ್ 30ರಂದು ನಿವೃತ್ತರಾಗುತ್ತಿದ್ದಾರೆ. ಸದ್ಯ ಅವರು ಹರ್ಯಾಣ ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು, ಇಂದು ಅವರ ಸರ್ಕಾರಿ ಸೇವೆಯ ಕೊನೆಯ ದಿನವಾಗಿದೆ.
2024ರ ಡಿಸೆಂಬರ್‌ನಲ್ಲಿ ಅಶೋಕ್ ಖೇಮ್ಕಾ ಹರ್ಯಾಣದ ಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದರು. ಇದು ಅವರು ಕೊನೆಯ ವರ್ಗಾವಣೆಯಾಗಿದೆ. 2012ರಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿಸಿದ ಗುರುಗ್ರಾಮದ ಭೂ ಒಪ್ಪಂದವನ್ನು ರದ್ದುಗೊಳಿಸಿದ್ದರು. ಅಂದಿನಿಂದ ಅವರ ಹೆಸರು ರಾಷ್ಟ್ರಮಟ್ಟದಲ್ಲಿ ಕೇಳಿ ಬರಲಾರಂಭಿಸಿತು.

1965, ಏಪ್ರಿಲ್ 30ರಂದು ಕೋಲ್ಕತ್ತಾದಲ್ಲಿ ಅಶೋಕ್ ಖೇಮ್ಕಾ ಜನಿಸಿದರು. ಐಐಟಿ ಕರಾಗ್‌ಪುರ್‌ನಿಂದ ಕಂಪ್ಯೂಟರ್ ಸೈನ್ಸ್ ವಿಯಷಯದಲ್ಲಿ ಬಿಟೆಕ್ ಪದವಿ ಪಡೆದಿರುವ ಅಶೋಕ್ ಖೇಮ್ಕಾ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನನ್ ಮತ್ತು ಫೈನಾನ್ಸ್ ವಿಷಯದಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಸರ್ಕಾರಿ ಸೇವೆಯಲ್ಲಿರುವಾಗಲೇ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು.
ಅಶೋಕ್ ಖೇಮ್ಕಾ ನಿವೃತ್ತಿ: ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಸುಮಾರು 34 ವರ್ಷಗಳ ಸೇವೆಯಲ್ಲಿ 57 ಬಾರಿ ವರ್ಗಾವಣೆಗೊಂಡಿದ್ದಾರೆ. ಆರು ತಿಂಗಳಿಗೊಮ್ಮೆ ಸರ್ಕಾರ ಅವರನ್ನು ವರ್ಗಾವಣೆ ಮಾಡುತ್ತಿತ್ತು. ಹರ್ಯಾಣ ಕೇಡರ್‌ನ ಐಎಎಸ್ ಅಧಿಕಾರಿಗಳಲ್ಲಿ ಅತಿ ಹೆಚ್ಚು ಬಾರಿ ವರ್ಗಾವಣೆಗೊಂಡವರಲ್ಲಿ ಅಶೋಕ್ ಖೇಮ್ಕಾ ಒಬ್ಬರು.
ಅಶೋಕ್ ಖೇಮ್ಕಾ ಹಾಲಿ ಸಚಿವ ಅನಿಲ್ ವಿಜಿ ಅಡಿಯಲ್ಲಿ ಬರುವ ಹರ್ಯಾಣ ಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಇವರ ಕೊನೆಯ ಸರ್ಕಾರಿ ಹುದ್ದೆಯಾಗಿದೆ. 10 ವರ್ಷಗಳ ಹಿಂದೆ ಇದೇ ಹುದ್ದೆಯಲ್ಲಿ ಅಶೋಕ್ ಖೇಮ್ಕಾ 4 ತಿಂಗಳು ಕೆಲಸ ಮಾಡಿ ಬಳಿಕ ವರ್ಗಾವಣೆಗೊಂಡಿದ್ದರು.
2023ರಲ್ಲಿ ಅಶೋಕ್ ಖೇಮ್ಕಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪತ್ರವನ್ನು ಬರೆದಿದ್ದರು. ಕಳೆದ 12 ವರ್ಷಗಳಲ್ಲಿ ಅಶೋಕ್ ಖೇಮ್ಕಾ ಸರ್ಕಾರದ ತಳ ಮಟ್ಟದ ಇಲಾಖೆಗಳು ಎಂದು ಪರಿಗಣಿಸಲಾದ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಅಶೋಕ್ ಖೇಮ್ಕಾ ಅವರನ್ನು 4 ಬಾರಿ ರಾಜ್ಯ ಪತ್ರಗಾರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. 2013ರಲ್ಲಿ ಮೊದಲು ಅವರನ್ನು ಪತ್ರಗಾರ ಇಲಾಖೆಗೆ ನಿಯೋಜನೆ ಮಾಡಲಾಗಿತ್ತು. ಪ್ರಧಾನ ನಿರ್ದೇಶಕ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅಶೋಕ್ ಖೇಮ್ಕಾ ತಮ್ಮ ಸೇವೆಯನ್ನು ತ್ಯಾಗ ಮಾಡಿದರು. ಹರ್ಯಾಣದಲ್ಲಿ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಸರ್ಕಾರ ಇದ್ದಾಗ ಸಹ ಅಶೋಕ್ ಖೇಮ್ಕಾ ಹಲವು ಬಾರಿ ವರ್ಗಾವಣೆಗೊಂಡಿದ್ದರು. ಬಿಜೆಪಿ ಸಹ ಅವರನ್ನು ಪತ್ರಗಾರ ಇಲಾಖೆಗೆ ವರ್ಗಾವಣೆ ಮಾಡಿತ್ತು.












Click it and Unblock the Notifications