ಕ್ಲರ್ಕ್ ಆಗಿದ್ದಾಕೆ ಈಗ IAS ಅಧಿಕಾರಿ: ಇದು 32ನೇ ವಯಸ್ಸಿನಲ್ಲಿ UPSC ಪಾಸ್ ಮಾಡಿದ ಮಿನ್ನು ಕಥೆ

ಕೇರಳದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಿನ್ನು ಪಿ.ಎಂ. ಜೋಶಿ ಅವರ ಜೀವನ ಪಯಣವು ಲಕ್ಷಾಂತರ ಮಹಿಳೆಯರಿಗೆ ಮತ್ತು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ ಎನ್ನಬಹುದು. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪಾಸು ಮಾಡುವುದೇಂದರೆ ಸಾಮಾನ್ಯ ಮಾತಲ್ಲ.

ಅದರಲ್ಲಿಯೂ ಮದುವೆಯಾಗಿ, ಮಗುವಿನ ತಾಯಿಯಾಗಿ, ಒಂದು ಕಡೆ ಕಚೇರಿಯ ಕೆಲಸ ಮಾಡುತ್ತಲೇ ಐಎಎಸ್ ಅಧಿಕಾರಿಯಾಗುವ ಕನಸನ್ನ ನನಸು ಮಾಡಿಕೊಂಡಿರುವ ಮಿನ್ನು ಅವರ ಕಥೆ ಅಸಾಮಾನ್ಯವಾದದ್ದು.

IAS Minnu

ಕೇರಳದ ಹಳ್ಳಿಯಿಂದ ಶುರುವಾದ ಐಎಎಸ್ ಕನಸು

ತನ್ನ ಮಗಳು ದೊಡ್ಡ ಅಧಿಕಾರಿಯಾಗಬೇಕು ಎಂಬುದು ಮಿನ್ನು ಅವರ ತಂದೆಯ ಅತಿ ದೊಡ್ಡ ಕನಸಾಗಿತ್ತು. ಅದೇ ಕನಸನ್ನ ಹೊತ್ತು ಬೆಳೆದ ಮಿನ್ನು ಅವರಿಗೆ ವಿಧಿಯ ಆಟ ಬೇರೆಯೇ ಆಗಿತ್ತು. ಅನಿರೀಕ್ಷಿತವಾಗಿ ತಂದೆ ಇಹಲೋಕ ತ್ಯಜಿಸಿದಾಗ, ಇಡೀ ಕುಟುಂಬದ ಜವಾಬ್ದಾರಿ ಮಿನ್ನು ಅವರ ಹೆಗಲೇರಿತು. ಕುಟುಂಬವನ್ನ ಆರ್ಥಿಕವಾಗಿ ಸರಿದೂಗಿಸಲು ಮತ್ತು ಆಸರೆಯಾಗಲು ಅವರು ಪೊಲೀಸ್ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದರೆ, ಎಷ್ಟೇ ಕಷ್ಟಗಳು ಎದುರಾದರೂ ತನ್ನ ತಂದೆ ಮಗಳು ಐಎಎಸ್‌ ಆಗಬೇಕು ಎಂದು ಕಂಡಿದ್ದ ಕನಸನ್ನ ಮಾತ್ರ ಅವರು ಎಂದಿಗೂ ಮರೆಯಲಿಲ್ಲ.

ಮಿನ್ನು ಅವರ ಜೀವನ ಹೀಗೆ ಎಲ್ಲ ಏರಿಳಿತಗಳ ನಡುವೆ ಸಾಗುತ್ತಿತ್ತು. ಉನ್ನತ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಅವರು, ಚಿಕ್ಕ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೇವಲ 23ನೇ ವಯಸ್ಸಿನಲ್ಲಿ ಅವರು ಮಗುವಿಗೆ ಜನ್ಮ ನೀಡಿದರು. ಒಂದು ಕಡೆ ಪೊಲೀಸ್ ಕ್ಲರ್ಕ್ ಹುದ್ದೆಯ ಜವಾಬ್ದಾರಿ, ಇನ್ನೊಂದು ಕಡೆ ಸಂಸಾರ, ಮನೆಯ ಕೆಲಸಗಳು ಮತ್ತು ಬೆಳೆಯುತ್ತಿರುವ ಮಗುವಿನ ಆರೈಕೆ. ಇವುಗಳ ನಡುವೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವುದು ಅವರಿಗೆ ಪ್ರತಿದಿನದ ಕಷ್ಟವಾಗ ತೊಡಗಿತು.

ಹಗಲಿರುಳು ಕಷ್ಟಪಟ್ಟು ಓದಿದರೂ ಹಲವು ಬಾರಿ ಸೋಲುಗಳು ಎದುರಾದವು. ಆಯಾಸದಿಂದ ಸುಸ್ತಾಗಿ, ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎನ್ನುವಷ್ಟರ ಮಟ್ಟಿಗೆ ಅವರು ಕುಗ್ಗಿಹೋಗಿದ್ದ ಕ್ಷಣಗಳೂ ಕೂಡ ಇದ್ದವು. ಆದರೆ ಮಿನ್ನು ಮಾತ್ರ ತಮ್ಮ ಪ್ರಯತ್ನವನ್ನ ನಿಲ್ಲಿಸಲಿಲ್ಲ.

ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ

ದೆಹಲಿಯಂತಹ ಮಹಾನಗರಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್ ಪಡೆಯುವವರ ನಡುವೆ, ಮಿನ್ನು ಪಿ ಎಂ ಜೋಶಿ ಐಎಎಸ್ ಕನಸನ್ನ ನನಸು ಮಾಡಿದ್ದು ಕೇವಲ ಸೇಲ್ಪ್‌ ಸ್ಟಡಿಯಿಂದ. ಅವರು ಯಾವುದೇ ದುಬಾರಿ ಕೋಚಿಂಗ್ ತರಗತಿಗಳಿಗೆ ಹೋಗಲಿಲ್ಲ. ಪ್ರತಿ ಸೋಲನ್ನೂ ತನ್ನ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡರು. ಅವರ ಈ ಹೋರಾಟದಲ್ಲಿ ಅವರ ಪತಿ ಬೆನ್ನೆಲುಬಾಗಿ ನಿಂತು ಸಂಪೂರ್ಣ ಬೆಂಬಲ ನೀಡಿದರು.

ಸತತ ಪ್ರಯತ್ನದ ಫಲವಾಗಿ, ತಮ್ಮ 32ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಕ್ಲರ್ಕ್ ಆಗಿದ್ದ ಮಿನ್ನು ಅವರು ಹೆಮ್ಮೆಯ ಐಎಎಸ್ ಅಧಿಕಾರಿಯಾಗಿ ಬದಲಾದರು. ಜವಾಬ್ದಾರಿಗಳ ಹೊರೆಯಿಂದ ತಮ್ಮ ಕನಸುಗಳನ್ನ ಮರೆತು ಕೂರುವ ಪ್ರತಿಯೊಬ್ಬ ಮಹಿಳೆಗೂ ಮಿನ್ನು ಅವರ ಈ ಸಾಧನೆ ಒಂದು ದೊಡ್ಡ ಪಾಠವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+