ಪಿಒಕೆಯಲ್ಲಿ ಈಗಲೂ ಉಗ್ರರ ನೆಲೆ, ಎಂಥ ಸವಾಲಿಗೂ ಭಾರತೀಯ ಸೇನೆ ಸರ್ವ ಸನ್ನದ್ಧ
ಭಾರತೀಯ ಸೇನೆ ಸರ್ವ ಸನ್ನದ್ಧ ಸ್ಥಿತಿಯಲ್ಲಿದೆ. ಯಾವುದೇ ಸವಾಲಿನ ಸನ್ನಿವೇಶವನ್ನು ಸಹ ಎದುರಿಸಬಲ್ಲೆವು. ಯಾರು ಯಾವುದೇ ಹೇಳಿಕೆ ನೀಡಿದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಜಿಒಸಿ ನಾರ್ಥರ್ನ್ ಕಮ್ಯಾಂಡ್, ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಹೇಳಿದ್ದಾರೆ.
ಭಾರತವು ಪಾಕಿಸ್ತಾನದ ನೆಲದಲ್ಲಿ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ನಾವು ಅಂಥ ಹತ್ತು ದಾಳಿ ಮಾಡುತ್ತೇವೆ ಎಂದು ಪಾಕ್ ಎಚ್ಚರಿಕೆ ನೀಡಿತ್ತು. ಇದಕ್ಕೆ ರಣ್ಬೀರ್ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳುವ ಭಯೋತ್ಪಾದಕರ ಪ್ರಯತ್ನವನ್ನು ಪರಿಣಾಮಕಾರಿಯಾಗಿ ತಡೆಯುವುದು ನಮ್ಮ ಕರ್ತವ್ಯ. ಇಂಥ ದಾಳಿಗಳು ಅದರ ಭಾಗ ಎಂದು ಅವರು ಹೇಳಿದ್ದಾರೆ.
ನಮಗೆ ದೊರೆತಿರುವ ಮಾಹಿತಿ ಪ್ರಕಾರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಈಗಲೂ ಉಗ್ರಗಾಮಿಗಳ ನೆಲೆಗಳಿವೆ. ಪಾಕಿಸ್ತಾನದಿಂದ ತರಬೇತಿ ಪಡೆದ ಉಗ್ರಗಾಮಿಗಳು ದೇಶದೊಳಕ್ಕೆ ನುಸುಳುವ ಪ್ರಯತ್ನಗಳನ್ನು ಮಾಡುವ ಬಗ್ಗೆ ಆಗಾಗ ವರದಿಗಳು ಬರುತ್ತಲೇ ಇರುತ್ತವೆ ಎಂದು ಕೂಡ ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಸೆಪ್ಟೆಂಬರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಹಲವು ನೆಲೆಗಳನ್ನು ಧ್ವಂಸ ಮಾಡಿ, ಭಯೋತ್ಪಾದಕರನ್ನು ಕೊಂದು ಹಾಕಿತ್ತು. ಆದರೆ ಇದನ್ನು ಪಾಕಿಸ್ತಾನವು ನಿರಾಕರಿಸುತ್ತಲೇ ಬರುತ್ತಿತ್ತು. ಆದರೆ ಈಚೆಗೆ ಪಾಕ್ ಸೇನಾ ವಕ್ತಾರ ಲಂಡನ್ ನಲ್ಲಿ ಹೇಳಿಕೆ ನೀಡಿದ್ದರು.
ಭಾರತದಿಂದ ಇನ್ನು ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ನಡೆದರೂ ಅಂಥ ಹತ್ತು ದಾಳಿಯನ್ನು ನಾವು ಮಾಡಲು ಸಾಮರ್ಥ್ಯ ಹೊಂದಿದ್ದೇವೆ ಎಂದಿದ್ದರು. ಸರ್ಜಿಕಲ್ ಸ್ಟ್ರೈಕ್ ಗೆ ಸಂಬಂಧಿಸಿದಂತೆ ಕೆಲ ವಿಡಿಯೋಗಳನ್ನು ಸಹ ಇತ್ತೀಚೆಗೆ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications