ಅಮ್ಮನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಮಿನಿ ರೋಪ್‌ವೇ ರೋಬೋಟ್ ನಿರ್ಮಿಸಿದ ಬಾಲಕ: ಭುವನೇಶ್ ಐಡಿಯಾಗೆ ನೆಟ್ಟಿಗರು ಫಿದಾ
ತಂತ್ರಜ್ಞಾನ ಅಥವಾ ಈ ಟೆಕ್ನಾಲಜಿ ಎನ್ನುವುದು ಕೇವಲ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಅಥವಾ ವಿಜ್ಞಾನಿಗಳಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ಆಸಕ್ತಿ ಹಾಗೂ ಕ್ರಿಯೇಟಿವಿಟಿ ಇದ್ದರೆ ಸಾಮಾನ್ಯ ಶಾಲಾ ವಿದ್ಯಾರ್ಥಿಯೂ ಹೊಸದೇನಾದರೂ ಕಂಡು ಹಿಡಿಯಬಹುದು ಎಂಬುದಕ್ಕೆ ಹೈದರಾಬಾದ್‌ನ ಬಾಲಕನೊಬ್ಬ ಸಾಕ್ಷಿಯಾಗಿದ್ದಾನೆ ನೋಡಿ.
ಹೌದು, ತಾಯಿಯ ಹುಟ್ಟುಹಬ್ಬಕ್ಕೆ ಸಾಮಾನ್ಯವಾಗಿ ಎಲ್ಲರೂ ಕೇಕ್ ತರುತ್ತಾರೆ, ಅಥವಾ ಬಟ್ಟೆ, ಬಳೆ, ಸರ ಎನ್ನುವ ಉಡುಗೊರೆಗಳನ್ನ ನೀಡುತ್ತಾರೆ. ಆದರೆ, ಹೈದರಾಬಾದ್‌ನ 10ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಅಮ್ಮನ ಜನ್ಮದಿನದ ಶುಭಾಶಯ ಕೋರಲು ತನ್ನದೇ ಆದ ಮಿನಿ ರೋಪ್‌ವೇ ರೋಬೋಟ್ ಒಂದನ್ನು ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಈ ಮುದ್ದಾದ ವಿಡಿಯೋ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೈದರಾಬಾದ್ ಬಾಲಕನ ವಿಭಿನ್ನ ಪ್ರಯತ್ನ
ತಾಯಿಗೆ ಸರ್ಪ್ರೈಸ್ ನೀಡಿದ ಈ ಪ್ರತಿಭಾವಂತ ಬಾಲಕನ ಹೆಸರು ಭುವನೇಶ್. ಕೇವಲ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ, ತನ್ನನ್ನ ತಾನು ರೊಬೊಟಿಕ್ ಇನ್‌ಸ್ಟ್ರಕ್ಟರ್ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾನೆ.
ಅಮ್ಮನ ಹುಟ್ಟುಹಬ್ಬವನ್ನ ಅತ್ಯಂತ ವಿಶೇಷವಾಗಿ ಆಚರಿಸಬೇಕು ಹಾಗೂ ತನ್ನ ತಾಂತ್ರಿಕ ಕೌಶಲವನ್ನ ಅದಕ್ಕಾಗಿ ಬಳಸಿಕೊಳ್ಳಬೇಕು ಎಂದು ನಿರ್ಧರಿಸಿದ ಭುವನೇಶ್, ಈ ಮಿನಿ ರೋಪ್‌ವೇ ವ್ಯವಸ್ಥೆಯನ್ನ ಅಭಿವೃದ್ಧಿಪಡಿಸಿದ್ದಾನೆ.
ತನ್ನ ಮನೆಯಲ್ಲೇ ಲಭ್ಯವಿದ್ದ ಕೆಲವು ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನ ಬಳಸಿ ಈ ಪುಟ್ಟ ರೋಬೋಟ್ ವ್ಯವಸ್ಥೆಯನ್ನ ರೂಪಿಸುವ ಮೂಲಕ ಆತ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ತಾಯಿಯ ಮೇಲಿನ ಪ್ರೀತಿ ಹಾಗೂ ವಿಜ್ಞಾನದ ಮೇಲಿನ ಆಸಕ್ತಿ ಎರಡೂ ಒಗ್ಗೂಡಿದಾಗ ಎಂತಹ ಅದ್ಭುತ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಇದೊಂದು ಒಳ್ಳೇಯ ಉದಾಹರಣೆ ಎನ್ನಬಹುದು.
ಆರ್‌ಡುನೊ ಪ್ರಾಜೆಕ್ಟ್ ಹಾಗೂ ರೋಬೋಟ್ ಕಾರ್ಯನಿರ್ವಹಿಸುವ ರೀತಿ
ತನ್ನ ಈ ವಿಶಿಷ್ಟ ಆವಿಷ್ಕಾರದ ಬಗ್ಗೆ ಭುವನೇಶ್ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನ ಹಂಚಿಕೊಂಡಿದ್ದಾನೆ. ಈ ಮಿನಿ ರೋಪ್‌ವೇ ನಿರ್ಮಿಸಲು ಆತ ಪ್ರಮುಖವಾಗಿ ಆರ್‌ಡುನೊ ಯುನೊ (Arduino Uno), ಇನ್‌ಫ್ರಾರೆಡ್ (IR) ಸೆನ್ಸಾರ್ ಮತ್ತು ರೇಡಿಯೋ ಫ್ರೀಕ್ವೆನ್ಸಿ ವೈರ್‌ಲೆಸ್ ಮಾಡ್ಯೂಲ್ ಅನ್ನ ಬಳಸಿಕೊಂಡಿದ್ದಾನೆ. ಇದರ ಕಾರ್ಯನಿರ್ವಹಣೆಯ ಹಿಂದಿನ ತಂತ್ರಜ್ಞಾನವೂ ಅತ್ಯಂತ ಸರಳ ಹಾಗೂ ಆಕರ್ಷಕವಾಗಿದೆ.
ಯಾರಾದರೂ ವ್ಯಕ್ತಿ ಈ ಸೆನ್ಸಾರ್ ಮುಂದೆ ಹಾದುಹೋದಾಗ ಅಥವಾ ಸೆನ್ಸಾರ್ ಮುಂದೆ ಕೈಯನ್ನಿಟ್ಟಾಗ, ಅದು ಚಲನೆಯನ್ನ ಗ್ರಹಿಸುತ್ತದೆ. ತಕ್ಷಣವೇ ಅಲ್ಲಿರುವ ಇನ್‌ಫ್ರಾರೆಡ್ ಸೆನ್ಸಾರ್ ಮೂಲಕ ರೇಡಿಯೋ ಫ್ರೀಕ್ವೆನ್ಸಿ ಮಾಡ್ಯೂಲ್‌ಗೆ ಸಿಗ್ನಲ್ ರವಾನೆಯಾಗುತ್ತದೆ.
ಆ ಸಿಗ್ನಲ್ ಅನ್ನ ರೋಪ್‌ವೇಯ ಇನ್ನೊಂದು ತುದಿಯಲ್ಲಿರುವ ರಿಸೀವರ್ ಸ್ವೀಕರಿಸಿ, ಹಗ್ಗಕ್ಕೆ ಜೋಡಿಸಲಾಗಿರುವ ಪುಟ್ಟ 'ಆವಿಷ್ಕಾರ್ ರೋಬೋಟ್' ಅನ್ನು ಆನ್ ಮಾಡುತ್ತದೆ. ಯಂತ್ರ ಚಾಲೂ ಆಗುತ್ತಿದ್ದಂತೆ, ಹಗ್ಗದ ಮೇಲೆ ಚಲಿಸುವ ಆ ಪುಟ್ಟ ರೋಬೋಟ್, ಶುಭಾಶಯ ಪತ್ರವನ್ನ ಹೊತ್ತುಕೊಂಡು ನೇರವಾಗಿ ಅಮ್ಮನಿಗೆ ತಲುಪಿಸುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್: ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ಈ ಸಂಪೂರ್ಣ ಪ್ರಕ್ರಿಯೆಯ ಪ್ರಾತ್ಯಕ್ಷಿಕೆಯನ್ನ ಭುವನೇಶ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, "ನನ್ನ ತಾಯಿಗೆ ರೋಪ್‌ವೇ ಸೆಟಪ್ ಮೂಲಕ ಬರ್ತ್‌ಡೇ ಕಾರ್ಡ್" ಎಂದು ಅಡಿಬರಹ ನೀಡಿದ್ದಾನೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್ ಮಾಡಿದ್ದಾರೆ. ಬಾಲಕನ ಈ ಅದ್ಭುತ ಐಡಿಯಾ ಕಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಯ ಮಳೆಯನ್ನೇ ಸುರಿಸುವಂತೆ ಮಾಡಿದೆ.
ಒಬ್ಬ ಬಳಕೆದಾರರು ಕಮೆಂಟ್ ಮಾಡಿ, "ಇದು ನಿಜಕ್ಕೂ ಅದ್ಭುತವಾಗಿದೆ. ನಮ್ಮ ದೇಶಕ್ಕೆ ಇಂತಹ ಯುವ ಪ್ರತಿಭೆಗಳ ಹಾಗೂ ಕೌಶಲಭರಿತ ಮಿದುಳುಗಳ ಅವಶ್ಯಕತೆ ಬಹಳಷ್ಟಿದೆ" ಎಂದು ಹುರಿದುಂಬಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ನಿನ್ನ ಆಸಕ್ತಿಯನ್ನ ಹೀಗೆಯೇ ಮುಂದುವರಿಸು, ಮುಂದೊಂದು ದಿನ ನೀನು ದೊಡ್ಡ ವಿಜ್ಞಾನಿಯಾಗಿ ಹೊಸ ಹೊಸ ಆವಿಷ್ಕಾರಗಳನ್ನ ಮಾಡುತ್ತೀ" ಎಂದು ಹಾರೈಸಿದ್ದಾರೆ.
ಒಟ್ಟಿನಲ್ಲಿ, ತಾಯಿಗೆ ಶುಭಾಶಯ ಕೋರಲು ಬಾಲಕ ಬಳಸಿದ ಈ ಟೆಕ್ನಾಲಜಿ ಐಡಿಯಾ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.


Click it and Unblock the Notifications
