ಕೊರೊನಾವೈರಸ್ ಔಷಧಿ: ಹೈದ್ರಾಬಾದ್ ಕಂಪನಿಯಲ್ಲಿ 2ನೇ ಹಂತದ ಪ್ರಯೋಗ
ಹೈದ್ರಾಬಾದ್, ಜೂನ್ 07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ನಡುವೆ ಹೈದ್ರಾಬಾದ್ ಮೂಲದ ವೈದ್ಯಕೀಯ ಸಂಸ್ಥೆಯೊಂದು ಕೊವಿಡ್-19 ಸೋಂಕಿನ ಔಷಧಿ ಸಂಶೋಧನೆಯಲ್ಲಿ ಎರಡನೇ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸುತ್ತಿದೆ.
ಹೈದ್ರಾಬಾದಿನ ಲಕ್ಸಾಯ್ ಲೈಫ್ ಸೈನ್ಸಸ್ ಕಂಪನಿಯು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ಎರಡನೇ ಹಂತದ ವೈದ್ಯಕೀಯ ಪ್ರಯೋಗ ನಡೆಸುತ್ತಿದೆ. ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಹೆಲ್ಮಿನಿಟಿಕ್ ವಿರೋಧಿ ಔಷಧಿಯಾದ ನಿಕ್ಲೋಸಮಿಡ್ ಬಳಸುವ ಬಗ್ಗೆ ವೈದ್ಯಕೀಯ ಪ್ರಯೋಗ ನಡೆಸಲಾಗುತ್ತಿದೆ.
ಕನಸು ಮತ್ತು ಕಾಯಿಲೆ: ಕೆನಡಾದಲ್ಲಿ 'ಮೆದುಳಿ'ಗೆ ಹೊಕ್ಕುತ್ತಿರುವ ಹೊಸ ರೋಗಾಣು!
"ಹೈದ್ರಾಬಾದಿನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ(IICT)ಯು ಸಹ ವೈದ್ಯಕೀಯ ಪ್ರಯೋಗದಲ್ಲಿ ತೊಡಗಿಸಿಕೊಂಡಿದೆ. ಒಂದು ವೇಳೆ ವೈದ್ಯಕೀಯ ಪ್ರಯೋಗವು ಯಶಸ್ವಿಯಾಗಿದ್ದಲ್ಲಿ ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗೆ ಒಂದು ಪರಿಣಾಮಕಾರಿ ಔಷಧಿ ಸಿಕ್ಕಂತೆ ಆಗುತ್ತದೆ ಎಂದು" IICT ನಿರ್ದೇಶಕ ಡಾ. ಶ್ರೀವರಿ ಚಂದ್ರಶೇಖರ್ ತಿಳಿಸಿದ್ದಾರೆ. ವಯಸ್ಕರಲ್ಲಿ ಮತ್ತು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೇಪ್ ವರ್ಮ್ ಸೋಂಕಿನ ಚಿಕಿತ್ಸೆಗಾಗಿ ನಿಕ್ಲೋಸಮಿಡ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ನಿಕ್ಲೋಸಮಿಡ್ ಔಷಧಿ ಹಿನ್ನೆಲೆ?
ಕೊರೊನಾವೈರಸ್ ಔಷಧಿ ಸಂಶೋಧನೆಯಲ್ಲಿ ಬಳಸಲಾಗುತ್ತಿರುವ ನಿಕ್ಲೋಸಮಿಡ್ ಡ್ರಗ್ ಅನ್ನು ಲಂಡನ್ ಮೂಲದ ಕಿಂಗ್ಸ್ ಕಾಲೇಜಿನಲ್ಲಿ ವಿಶ್ವಾಸಾರ್ಹ ಔಷಧಿಯಾಗಿ ಮರುರೂಪಿಸಲಾಗಿದೆ. ಇತ್ತೀಚಿಗೆ ಸಿಎಸ್ಐಆರ್-ಐಐಐಎಂ, ಜಮ್ಮು ಮತ್ತು ಎನ್ ಸಿಬಿಎಸ್ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಲಾಗಿತ್ತು. ಈ ವೇಳೆ ನಿಕ್ಲೋಸಮಿಡ್ ಎನ್ನುವುದು ಸಾರ್ಸ್-ಕೊವಿ-2 ರೋಗಾಣು ಮನುಷ್ಯನ ದೇಹ ಪ್ರವೇಶಿಸುವುದಕ್ಕೆ ಪ್ರತಿರೋಧವೊಡ್ಡವು ಸಾಮರ್ಥ್ಯವನ್ನು ಹೊಂದಿರುವುದಾಗಿ ತಿಳಿಸಿದೆ.

ವೈದ್ಯಕೀಯ ಪ್ರಯೋಗ ಪೂರ್ಣಗೊಳ್ಳಲು 12 ವಾರ
ಎರಡನೇ ಹಂತದ ವೈದ್ಯಕೀಯ ಪ್ರಯೋಗವು ಆರಂಭಿಕ ಹಂತದಲ್ಲಿದ್ದು, ಮುಂದಿನ 8 ರಿಂದ 12 ವಾರಗಳಲ್ಲಿ ಎಲ್ಲ ಹಂತಗಳನ್ನು ದಾಟುವ ನಿರೀಕ್ಷೆಯಿದೆ ಎಂದು ಲಕ್ಸಾಯ್ ಲೈಫ್ ಸೈನ್ಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ರಾಮ್ ಉಪಾಧ್ಯಾಯ ತಿಳಿಸಿದ್ದಾರೆ. ವೈದ್ಯಕೀಯ ಪ್ರಯೋಗದಲ್ಲಿ ಕಂಡು ಬರುವ ಯಶಸ್ಸನ್ನು ಆಧಾರವಾಗಿ ಇಟ್ಟುಕೊಂಡು ಕೊವಿಡ್-19 ರೋಗಿಗಳ ಚಿಕಿತ್ಸೆಗೆ ಈ ಲಸಿಕೆಯನ್ನು ಬಳಕೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊವಿಡ್-19 ರೋಗಿಗಳ ಚಿಕಿತ್ಸೆಗೆ ಅನಗತ್ಯ ಔಷಧಿ ಬಳಕೆ ಸಲ್ಲದು
ಕೊರೊನಾವೈರಸ್ ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಹೈಡ್ರೋಕ್ಸಿ ಕ್ಲೋರೋಕ್ಯುನ್, ಇವೆರ್ ಮೆಕ್ಟಿನ್, ಡೊಕ್ಸಿಸಿಕ್ಲಿನ್, ಜಿಂಕ್ ಮತ್ತು ಮಲ್ಟಿ ವಿಟಮಿನ್ ಔಷಧಿಗಳನ್ನು ನೀಡುವಂತಿಲ್ಲ ಎಂದು ವೈದ್ಯರಿಗೆ ಮಾರ್ಗಸೂಚಿಗಳ ಮೂಲಕ ಸೂಚಿಸಲಾಗಿದೆ. ಕೊರೊನಾವೈರಸ್ ಸೋಂಕಿತರಲ್ಲಿ ಜ್ವರದಿಂದ ಬಳಲುತ್ತಿರುವವರಿಗೆ ಆಂಟಿಪೈರೆಟಿಕ್ ಮತ್ತು ಶೀತದ ಲಕ್ಷಣಗಳನ್ನು ಹೊಂದಿರುವ ಕೊವಿಡ್-19 ಸೋಂಕಿತರಿಗೆ ಆಂಟಿಟಸ್ಸಿವ್ ಔಷಧಿಯನ್ನು ಮಾತ್ರ ನೀಡುವುದಕ್ಕೆ ಅನುಮತಿ ನೀಡಲಾಗಿದೆ. ಅನಗತ್ಯವಾಗಿ ಕೊರೊನಾವೈರಸ್ ಸೋಂಕು ತಪಾಸಣೆಗಾಗಿ ಸಿಟಿ ಸ್ಕ್ಯಾನ್ ರೀತಿಯ ಪರೀಕ್ಷೆಗಳಿಗೆ ಶಿಫಾರಸ್ಸು ಮಾಡುವಂತಿಲ್ಲ ಎಂದು ಸಚಿವಾಲಯವು ಸೂಚನೆ ನೀಡಿದೆ.

ಕೊವಿಡ್-19 ರೋಗಿಗಳ ಚಿಕಿತ್ಸೆಗೆ ನಿಗದಿತ ಔಷಧಿಗಳಿಲ್ಲ
ಭಾರತದಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವ ರೋಗಿಗಳಿಗೆ ನೀಡುವುದಕ್ಕೆ ಪ್ರತ್ಯೇಕ ಹಾಗೂ ನಿಗದಿತ ಔಷಧಿಗಳಿಲ್ಲ. ಈ ಹಿನ್ನೆಲೆ ಸಾಮಾನ್ಯ ಔಷಧಿಗಳ ಜೊತೆಗೆ ವಿಟಮಿನ್ ವೃದ್ಧಿಸುವ ಔಷಧಿಗಳನ್ನು ನೀಡಲಾಗುತ್ತಿದೆ. ಇದರ ಹೊರತಾಗಿ ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.