HRA: 1 ಲಕ್ಷ ರೂ ಬಾಡಿಗೆಗೆ ಓನರ್ ಪ್ಯಾನ್ ಕಡ್ಡಾಯ

ನಕಲಿ ರಸೀದಿ ತೋರಿಸಿ ಮನೆ ಬಾಡಿಗೆ ಹೆಸರಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳುವವರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಈ ನಿಯಮವನ್ನು ಬಿಗಿಗೊಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಇತ್ತೀಚೆಗೆ ಈ ಸುತ್ತೋಲೆ ಹೊರಡಿಸಿದ್ದು, ಮುಂದಿನ ಹಣಕಾಸು ವರ್ಷದಲ್ಲಿ (2014-15) ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಹೊಸ ನಿಯಮದ ಪ್ರಕಾರ ಮನೆ ಬಾಡಿಗೆಗೆ (HRA) ಆದಾಯ ತೆರಿಗೆ ವಿನಾಯಿತಿ ಸಿಗಬೇಕಾದರೆ ವಾರ್ಷಿಕ ಮನೆ ಬಾಡಿಗೆ 1 ಲಕ್ಷ ರೂ. ಗಿಂತ ಅಧಿಕವಿದ್ದರೆ ಕಡ್ಡಾಯವಾಗಿ ಮನೆ ಮಾಲೀಕರ ಪ್ಯಾನ್ ಕಾರ್ಡ್ ನಂಬರ್ (Permanent Account Number- PAN) ನೀಡಬೇಕಾಗುತ್ತದೆ. ಈವರೆಗೆ ಮಾಸಿಕ ಮನೆ ಬಾಡಿಗೆ 15,000 ರೂ.ಗಿಂತ (ವಾರ್ಷಿಕ 1.8 ಲಕ್ಷ ರೂ.) ಹೆಚ್ಚು ಮಾವತಿಸುವಂತಿದ್ದರೆ ಮಾತ್ರ ಮನೆ ಮಾಲೀಕರ ಪ್ಯಾನ್ ನಂಬರ್ ದಾಖಲಿಸಬೇಕಿತ್ತು.
ಮನೆ ಮಾಲೀಕನ ಬಳಿಯೇ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಬಾಡಿಗೆಗಿರುವ ನೌಕರನು, ಆ ಕುರಿತು ಮನೆ ಮಾಲೀಕನ ಹೆಸರು ಮತ್ತು ವಿಳಾಸದ ಜತೆಗೆ ಮುಚ್ಚಳಿಕೆ ಬರೆದು ಕೊಡಬೇಕು. ಮಾಸಿಕ 8,333 ರೂ. ಗಿಂತ ಕಡಿಮೆ ಬಾಡಿಗೆ ಪಾವತಿಸುತ್ತಿದ್ದರೂ ಮನೆ ಬಾಡಿಗೆಯಡಿ ತೆರಿಗೆ ವಿನಾಯಿತಿ ಬೇಕಾದರೆ ಬಾಡಿಗೆ ರಸೀದಿ ಕೊಡಬೇಕು. ಆದರೆ ಆಡಳಿತಾತ್ಮಕ ಅನುಕೂಲಕ್ಕಾಗಿ ತಿಂಗಳಿಗೆ 3000 ರೂ. ಗಿಂತ ಕಡಿಮೆ ಮನೆ ಬಾಡಿಗೆ ಭತ್ಯೆ ಪಾವತಿಸುವವರಿಗೆ ರಸೀದಿ ಹಾಜರುಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ.












Click it and Unblock the Notifications