HP Result 2022; ಅಳಿಯನನ್ನೇ ಸೋಲಿಸಿ ಕ್ಷೇತ್ರ ಉಳಿಸಿದ ಕಾಂಗ್ರೆಸ್ ನಾಯಕ!
ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಗುರುವಾರ ಬೆಳಗ್ಗೆ 8 ಗಂಟೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಯಿತು. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 35.
2022ರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಅಳಿಯನನ್ನು ಸೋಲಿಸಿದ ಮಾವ; ಸೋಲನ್ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧಾನಿ ರಾಮ್ ಸೆಂಡಿಲ್ 82ನೇ ವಯಸ್ಸಿನಲ್ಲಿ ಎದುರಾಳಿಯಾದ ಅಳಿಯ, ಬಿಜೆಪಿ ಅಭ್ಯರ್ಥಿ ರಾಜೇಶ್ ಕಾಶ್ಯಪ್ ಸೋಲಿಸಿದ್ದಾರೆ.
3,858 ಮತಗಳ ಅಂತರದಿಂದ ಧಾನಿ ರಾಮ್ ಸೆಂಡಿಲ್ ಅಳಿಯನ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎಎಪಿಯ ಅಂಜು ರಾಥೋರ್ ಸಹ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದರು.
2017ರ ಚುನಾವಣೆಯಲ್ಲಿಯೂ ಧಾನಿ ರಾಮ್ ಸೆಂಡಿಲ್ ಕ್ಷೇತ್ರದಲ್ಲಿ 26,200 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2012ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡಿದ್ದರು. ಧಾನಿ ರಾಮ್ ಸೆಂಡಿಲ್ ಈ ಹಿಂದೆ ಸಂಸದರಾಗಿ ಶಿಮ್ಲಾವನ್ನು ಪ್ರತಿನಿಧಿಸುತ್ತಿದ್ದರು.
ರಾಜೇಶ್ ಕಾಶ್ಯಪ್ ಕ್ಷೇತ್ರದಲ್ಲಿನ ಪಾರ್ಕಿಂಗ್ ಮತ್ತು ಒಳ ಚರಂಡಿ ಸಮಸ್ಯೆಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಆದರೆ ಧಾನಿ ರಾಮ್ ಸೆಂಡಿಲ್ ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಯೋಜನೆಯನ್ನು ಬಿಜೆಪಿ ಸರ್ಕಾರ ಮುಂದುವರೆಸಲಿಲ್ಲ ಎಂದು ಪ್ರಚಾರ ಮಾಡಿದ್ದರು.
ಸೋಲನ್ ವಿಧಾನಸಭಾ ಕ್ಷೇತ್ರ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿದೆ. ಇಲ್ಲಿ ಬೆಳೆಯುವ ಅಣಬೆ ಬಹಳ ಪ್ರಸಿದ್ಧಿಯಾಗಿದೆ.












Click it and Unblock the Notifications