ಡಾಕ್ಟರ್ ಆಗುವ ಕನಸು ಕಮರಿದರೂ ಛಲ ಬಿಡಲಿಲ್ಲ: ಬಡ ಮಕ್ಕಳ ಬಾಳಲ್ಲಿ ಬೆಳಕಾದ ಯುವಕನ ಸ್ಪೂರ್ತಿದಾಯಕ ಕಥೆ

ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ದೊಡ್ಡ ಕನಸಿರುತ್ತದೆ. ಆದರೆ, ಆ ಕನಸು ನನಸಾಗುವ ಹಾದಿಯಲ್ಲಿ ಅನೇಕ ಅಡೆಚಣೆಗಳು ಅದರಲ್ಲೂ ಹಣಕಾಸಿನ ಅಡಚಣೆ ಎದುರಾದಾಗ ಬಹುತೇಕರು ನಿರಾಸೆಯಿಂದ ಹಿಂದಕ್ಕೆ ಸರಿಯುತ್ತಾರೆ. ಆದರೆ, ಬಿಹಾರದ ಮುಂಗೇರ್ ಮೂಲದ ಜೀಶನ್ ಅಲಿ ಅವರ ಕಥೆ ಸ್ವಲ್ಪ ಬೇರೆ ರೀತಿಯಿದೆ.

ಹಣದ ಕೊರತೆಯಿಂದಾಗಿ ತನ್ನ ಡಾಕ್ಟರ್‌ ಆಗುವ ಕನಸು ಭಗ್ನಗೊಂಡಾಗ ಅವರು ಕುಗ್ಗಿ ಹೋಗಲಿಲ್ಲ. ಬದಲಾಗಿ, ತನಗೆ ಸಿಗದ ಅವಕಾಶಗಳು ಇತರ ಬಡ ಮಕ್ಕಳಿಗೆ ಸಿಗುವಂತೆ ಮಾಡಲು ನಿರ್ಧರಿಸಿದರು. ಇದರ ಫಲವಾಗಿ ಇಂದು ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪವಾಗಿದ್ದಾರೆ.

How Zeeshan Ali Built Social Shapes Foundation To Help Rural Kids After Losing His Own Medical Dream

ಜೀಶನ್ ಅಲಿ ಸ್ಪೂರ್ತಿದಾಯಕ ಪಯಣ: ಕಮರಿದ ಕನಸಿನಿಂದ ಹೊಸ ಗುರಿಯೆಡೆಗೆ

ಜೀಶನ್ ಅಲಿ ಅವರು ಕೇವಲ 10 ವರ್ಷದವರಿದ್ದಾಗಲೇ ತಮ್ಮ ತಂದೆಯನ್ನ ಕಳೆದುಕೊಂಡರು. ತಂದೆಯ ಪ್ರೀತಿಯಿಂದ ವಂಚಿತರಾದ ಅವರು, ಬಡತನದ ಬೇಗೆಯ ನಡುವೆಯೂ ಬಿಎಸ್‌ಎಫ್ ವಸತಿ ಶಾಲೆಯಲ್ಲಿ ಓದುವ ಅವಕಾಶ ಪಡೆದರು. ಶಾಲಾ ದಿನಗಳಲ್ಲಿ ಕಷ್ಟಪಟ್ಟು ಓದಿದ ಅವರು, ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲೂ ತೇರ್ಗಡೆಯಾದರು.

ಡಾಕ್ಟರ್ ಆಗಿ ಸಮಾಜದ ಸೇವೆ ಮಾಡಬೇಕು ಎಂಬುದು ಅವರ ಅತಿ ದೊಡ್ಡ ಕನಸಾಗಿತ್ತು. ಆದರೆ, ಮೆಡಿಕಲ್ ಕಾಲೇಜಿನ ದುಬಾರಿ ಶುಲ್ಕ ಭರಿಸಲು ಅವರ ಕುಟುಂಬದ ಬಳಿ ಹಣವಿರಲಿಲ್ಲ. ಬಡತನದ ಕಾರಣದಿಂದಾಗಿ ಡಾಕ್ಟರ್ ಆಗುವ ಅವರ ಕನಸು ಕಮರಿಹೋಯಿತು. ಆದರೆ, ಈ ಕಮರಿದ ಕನಸೇ ಅವರ ಮುಂದಿನ ಬಹುದೊಡ್ಡ ಸಾಧನೆಗೆ ಬುನಾದಿಯಾಯಿತು.

ಸೋಶಿಯಲ್ ಶೇಪ್ಸ್ ಫೌಂಡೇಶನ್ ಸ್ಥಾಪನೆ

ವೈದ್ಯಕೀಯ ಸೀಟು ಕೈತಪ್ಪಿದ ನಂತರ ಜೀಶನ್ ಅವರು ಕೃಷಿ ವಿಷಯದಲ್ಲಿ ಪದವಿ ಪಡೆದರು. ಬಳಿಕ ಭುವನೇಶ್ವರದ ಎಕ್ಸ್‌ಐಎಂ ಸಂಸ್ಥೆಯಲ್ಲಿ ಗ್ರಾಮೀಣ ನಿರ್ವಹಣೆ ಕುರಿತು ಉನ್ನತ ವ್ಯಾಸಂಗ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಯನದ ಭಾಗವಾಗಿ ಅವರು ಅನೇಕ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು. ಅಲ್ಲಿನ ಗ್ರಾಮೀಣ ಮಕ್ಕಳು ಸಾಧಿಸುವ ದೊಡ್ಡ ಕನಸುಗಳನ್ನ ಹೊಂದಿದ್ದರೂ, ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶಗಳ ಕೊರತೆಯಿಂದಾಗಿ ಪರದಾಡುತ್ತಿರುವುದನ್ನ ಅವರು ಸೂಕ್ಷ್ಮವಾಗಿ ಗಮನಿಸಿದರು.

ತನ್ನಂತೆಯೇ ಹಣದ ಕೊರತೆಯಿಂದ ಯಾವೊಬ್ಬ ಪ್ರತಿಭಾವಂತ ಮಗುವಿನ ಕನಸು ಕಮರಬಾರದು ಎಂದು ನಿರ್ಧರಿಸಿದ ಜೀಶನ್, 2019 ರಲ್ಲಿ ಒಡಿಶಾದ ಕೇವಲ ಎಂಟು ಹಳ್ಳಿಗಳಲ್ಲಿ 'ಸೋಷಿಯಲ್ ಶೇಪ್ಸ್ ಫೌಂಡೇಶನ್' ಎಂಬ ಸಂಸ್ಥೆಯನ್ನ ಹುಟ್ಟುಹಾಕಿದರು.

ವಿಕಲ್ಪ್ ಕಾರ್ಯಕ್ರಮದ ಯಶಸ್ಸು

ಜೀಶನ್ ಅವರ ಈ ಸಂಸ್ಥೆ ಇಂದು ಅನೇಕ ಮಕ್ಕಳ ಬಾಳಲ್ಲಿ ಬೆಳಕಾಗಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಒಂದೊಳ್ಳೆ ಉದಾಹರಣೆ ಎಂದರೆ ಗೌರಿ ಎಂಬ 13 ವರ್ಷದ ಸೌರ ಆದಿವಾಸಿ ಬಾಲಕಿಯ ಕಥೆ. ತಾಯಿಯನ್ನು ಕಳೆದುಕೊಂಡಿದ್ದ ಈ ಬಾಲಕಿ, ಶಾಲೆಗೆ ಹೋಗುವುದನ್ನ ಅರ್ಧಕ್ಕೆ ಬಿಟ್ಟಿದ್ದಳು. ಈ ವಿಷಯ ತಿಳಿದ ಸೋಷಿಯಲ್ ಶೇಪ್ಸ್ ಫೌಂಡೇಶನ್‌ನ ತಂಡವು, ತಮ್ಮ 'ವಿಕಲ್ಪ್' ಕಾರ್ಯಕ್ರಮದ ಮೂಲಕ ಆಕೆಗೆ ನೆರವು ನೀಡಿತು. ಆಕೆಗೆ ಮತ್ತೆ ಶಿಕ್ಷಣ ಮುಂದುವರಿಸಲು ಅಗತ್ಯವಾದ ಕೌನ್ಸೆಲಿಂಗ್ ಹಾಗೂ ಮಾರ್ಗದರ್ಶನ ನೀಡಿ, ಕೊನೆಗೆ ಸರ್ಕಾರಿ ವಸತಿ ಶಾಲೆಯಲ್ಲಿ ದಾಖಲಾತಿ ಮಾಡಿಸಿತು. ಇಂದು ಗೌರಿಯಂತಹ ಅನೇಕ ಮಕ್ಕಳು ವಿಕಲ್ಪ್ ಯೋಜನೆಯಿಂದ ಮರುಜೀವ ಪಡೆದಿದ್ದಾರೆ.

149 ಹಳ್ಳಿಗಳಿಗೆ ವಿಸ್ತರಣೆ: ಯುವ ಸಮುದಾಯಕ್ಕೆ ದಾರಿದೀಪ

ಕೇವಲ ಎಂಟು ಹಳ್ಳಿಗಳಿಂದ ಆರಂಭವಾದ ಸೋಷಿಯಲ್ ಶೇಪ್ಸ್ ಫೌಂಡೇಶನ್‌ನ ಕಾರ್ಯವ್ಯಾಪ್ತಿ ಈಗ ಬಹುದೊಡ್ಡದಾಗಿ ಬೆಳೆದಿದೆ. ಜೂನ್ 2026 ರ ವೇಳೆಗೆ, ಈ ಸಂಸ್ಥೆಯು ಒಡಿಶಾದ ಆರು ಜಿಲ್ಲೆಗಳ 149 ಕ್ಕೂ ಹೆಚ್ಚು ಹಳ್ಳಿಗಳಿಗೆ ವಿಸ್ತರಣೆಯಾಗಿದೆ.

ಪ್ರಸ್ತುತ ಈ ಸಂಸ್ಥೆಯು ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳತ್ತ ಹೆಜ್ಜೆ ಹಾಕಲು ಸಾವಿರಾರು ಯುವಕ-ಯುವತಿಯರಿಗೆ ನೆರವಾಗುತ್ತಿದೆ. ಜೀವನವನ್ನ ಬದಲಾಯಿಸುವಂತಹ ಘಟನೆಗಳು ಕೇವಲ ದೊಡ್ಡ ಅವಕಾಶಗಳಿಂದಲೇ ಶುರುವಾಗುವುದಿಲ್ಲ, ಬದಲಾಗಿ "ಇದಕ್ಕೊಂದು ದಾರಿ ಹುಡುಕೋಣ" ಎಂಬ ಸಣ್ಣ ಪ್ರಯತ್ನದಿಂದಲೇ ಶುರುವಾಗುತ್ತದೆ ಎಂಬುದಕ್ಕೆ ಜೀಶನ್ ಅಲಿ ಅವರ ಈ ಸ್ಪೂರ್ತಿದಾಯಕ ಪಯಣವೇ ಸಾಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+