ಪಾರ್ಕ್‌ಗಳಲ್ಲಿ ಓದುಗರ ಗಮನ ಸೆಳೆಯುತ್ತಿರುವ ಉಚಿತ ಮಿನಿ ಲೈಬ್ರರಿ; ಇದು ಇಬ್ಬರು ಸ್ನೇಹಿತರ ವಿನೂತನ ಪ್ರಯೋಗ
ಅಹಮದಾಬಾದ್‌ನ ಪರಿಮಲ್ ಗಾರ್ಡನ್‌ನಲ್ಲಿ ಪ್ರತಿದಿನ ಸಂಜೆ ಜನರು ವಾಯುವಿಹಾರಕ್ಕೆ ಬರುತ್ತಾರೆ. ಮಕ್ಕಳು ಆಟವಾಡುತ್ತಿದ್ದರೆ, ವಯಸ್ಸಾದವರು ಮರದ ಕೆಳಗಿನ ಬೆಂಚುಗಳ ಮೇಲೆ ವಿಶ್ರಮಿಸುತ್ತಿರುತ್ತಾರೆ. ಈ ಗದ್ದಲದ ನಡುವೆ ಈಗ ಅಲ್ಲಿರುವ ಒಂದು ಚಿಕ್ಕ ಮರದ ಕಪಾಟು ಜನರ ಗಮನ ಸೆಳೆಯುತ್ತಿದೆ ನೋಡಿ.
ಅದರಲ್ಲಿ ಜೋಡಿಸಿಟ್ಟಿರುವ ಪುಸ್ತಕಗಳನ್ನ ಮಕ್ಕಳು, ವಯಸ್ಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಆಸಕ್ತಿಯಿಂದ ಓದುತ್ತಾರೆ. ಇಲ್ಲಿ ಯಾವುದೇ ಲೈಬ್ರರಿಯನ್ ಇಲ್ಲ, ಸದಸ್ಯತ್ವದ ಕಾರ್ಡ್ ಕೂಡ ಬೇಕಿಲ್ಲ, ದಂಡ ಕಟ್ಟುವ ಭಯವೂ ಇಲ್ಲ. ಕೇವಲ ನಂಬಿಕೆಯ ಮೇಲೆ ನಡೆಯುತ್ತಿರುವ ಈ ಉಚಿತ ಮಿನಿ ಲೈಬ್ರರಿ ಎಲ್ಲರಿಗೂ ಖುಷಿ ನೀಡುತ್ತಿದೆ.

ಸಾರ್ವಜನಿಕ ಗ್ರಂಥಾಲಯ ನಿರ್ಮಾಣ: ಕೇರಳದಿಂದ ಸಿಕ್ಕ ಪ್ರೇರಣೆ
ಈ ಐಡಿಯಾ ಹುಟ್ಟಿದ್ದು ಹೀತ್ ದೋಷಿ ಮತ್ತು ಓಮ್ ಠಕ್ಕರ್ ಎಂಬ ಇಬ್ಬರು ಸ್ನೇಹಿತರು ಕಾಲೇಜಿನಲ್ಲಿದ್ದಾಗ. ಸಾಮಾಜಿಕ ಜಾಲತಾಣಗಳಿಂದ ಆಚೆಗೂ ಪುಸ್ತಕ ಪ್ರೇಮಿಗಳು ಸೇರಲು ಒಂದು ವೇದಿಕೆ ಕಲ್ಪಿಸುವ ಉದ್ದೇಶದಿಂದ ಅವರು ಸೆಪ್ಟೆಂಬರ್ 2023ರಲ್ಲಿ ಯುವರ್ ರೀಡಿಂಗ್ ಸರ್ಕಲ್ ಎಂಬ ಸಮುದಾಯವನ್ನ ಕಟ್ಟಿದರು.
ಒಮ್ಮೆ ಕೇರಳದ ಪೆರುಂಕುಲಂ ಎಂಬ ಗ್ರಾಮದಲ್ಲಿ ಪ್ರತಿ ಕೆಲವು ಮೀಟರ್‌ಗಳಿಗೆ ಇರುವ ಸಾರ್ವಜನಿಕ ಗ್ರಂಥಾಲಯಗಳ ಬಗೆಗಿನ ವಿಡಿಯೋ ನೋಡಿದ ಇವರು, ಅದೇ ಮಾದರಿಯನ್ನ ತಮ್ಮ ನಗರದಲ್ಲೂ ಏಕೆ ಮಾಡಬಾರದು ಎಂದು ಯೋಚಿಸಿದರು. ಪಾರ್ಕ್‌ಗಳಲ್ಲಿ ಜನರು ನಿರಾಳವಾಗಿರುತ್ತಾರೆ ಮತ್ತು ಮೊಬೈಲ್ ನೋಡುವ ಬದಲು 10 ನಿಮಿಷ ಪುಸ್ತಕ ಓದಿದರೂ ಅದು ಸಾರ್ಥಕ ಎಂಬ ಕಾರಣಕ್ಕೆ ಪಾರ್ಕ್‌ಗಳನ್ನೇ ಲೈಬ್ರರಿ ಜಾಗವಾಗಿ ಆಯ್ಕೆ ಮಾಡಿಕೊಂಡರು. ಜೂನ್ 2024ರಲ್ಲಿ ಮೊದಲ ಲೈಬ್ರರಿ ಆರಂಭವಾಯಿತು.
ವಿಶ್ವಾಸವೇ ಬಂಡವಾಳ, ಓದುವ ಹವ್ಯಾಸ ಹೆಚ್ಚಿಸುವ ಗುರಿ
ಈ ಲೈಬ್ರರಿಯ ಅಂತಹದ್ದೇನು ಕಠಿಣ ನಿಯಮಗಳಿಲ್ಲ. ಯಾರು ಬೇಕಾದರೂ ಪುಸ್ತಕವನ್ನ ಓದಲು ತೆಗೆದುಕೊಂಡು ಹೋಗಬಹುದು, ಆದರೆ ಬದಲಿಗೆ ತಮ್ಮ ಬಳಿಯಿರುವ ಒಂದು ಪುಸ್ತಕವನ್ನ ಅಲ್ಲಿ ಇಡಬೇಕು. ಈ ವ್ಯವಸ್ಥೆ ಸಂಪೂರ್ಣವಾಗಿ ಜನರ ಪ್ರಾಮಾಣಿಕತೆಯ ಮೇಲೆ ನಿಂತಿದೆ. ಒಮ್ಮೆ ವಡೋದರದ ಕಾಮಾಟಿ ಬಾಗ್‌ನಲ್ಲಿ ಲೈಬ್ರರಿ ತೆರೆದ ಕೇವಲ ಎರಡೇ ದಿನಗಳಲ್ಲಿ ಕಪಾಟಿನಲ್ಲಿದ್ದ ಎಲ್ಲಾ ಪುಸ್ತಕಗಳು ಖಾಲಿಯಾಗಿದ್ದವು. ಇದರಿಂದ ಬೇಸರಗೊಂಡಿದ್ದ ಈ ಸ್ನೇಹಿತರಿಗೆ ಮುಂದಿನ ವಾರ ದೊಡ್ಡ ಅಚ್ಚರಿಯೇ ಕಾದಿತ್ತು.
ಸ್ಥಳೀಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡ ತಕ್ಷಣ, ಅಲ್ಲಿನ ಜನರೇ ಸ್ವಯಂಪ್ರೇರಿತರಾಗಿ ತಮ್ಮ ಪುಸ್ತಕಗಳನ್ನ ತಂದು ಕಪಾಟನ್ನು ಮತ್ತೆ ತುಂಬಿಸಿದ್ದರು. ಜನರ ಈ ಸ್ಪಂದನೆ ಓದುವ ಹವ್ಯಾಸವನ್ನ ಬೆಳೆಸುವ ಇವರ ಪ್ರಯತ್ನಕ್ಕೆ ದೊಡ್ಡ ಬೆಂಬಲ ಸಿಕ್ಕಂತಾಯಿತು.
ಸರ್ಕಾರದ ಅನುಮತಿ
ಪಾರ್ಕ್‌ನಲ್ಲಿ ಲೈಬ್ರರಿ ಸ್ಥಾಪಿಸುವುದು ನಾವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ತೋಟಗಾರಿಕಾ ಇಲಾಖೆಯಿಂದ ಸರ್ಕಾರದ ಅನುಮತಿ ಪಡೆಯಲು ಇವರು ವಾರಗಟ್ಟಲೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಯಿತು.
ಇಲ್ಲಿ ಯಾರನ್ನಾ ಕೇಳಬೇಕು, ಯಾರಿಗೆ ಈ ಅಧಿಕಾರವಿದೆ ಎಂಬುದೇ ಗೊತ್ತಾಗಲಿಲ್ಲ. ತಮ್ಮಂತೆಯೇ ಲೈಬ್ರರಿ ತೆರೆಯಲು ಬಯಸುವವರಿಗೆ ಇವರು ನೀಡುವ ಮೊದಲ ಸಲಹೆಯೆಂದರೆ, "ಮೊದಲು ಅಧಿಕಾರಿಗಳನ್ನ ಭೇಟಿಯಾಗಿ ಸ್ಪಷ್ಟವಾದ ಪ್ರಸ್ತಾವನೆ ನೀಡಿ ಅನುಮತಿ ಪಡೆದುಕೊಳ್ಳಿ, ಆನಂತರವಷ್ಟೇ ಲೈಬ್ರರಿ ನಿರ್ಮಾಣಕ್ಕೆ ಕೈಹಾಕಿ."
ಪ್ರಸ್ತುತ ಅಹಮದಾಬಾದ್ ಮತ್ತು ವಡೋದರಾದಲ್ಲಿ 13 ಗ್ರಂಥಾಲಯಗಳನ್ನ ಸ್ಥಾಪಿಸಿರುವ ಈ ಸ್ನೇಹಿತರು, ಮಾರ್ಚ್ 2026ರಲ್ಲಿ 'ವಿರಕ್ತ್ ಫೌಂಡೇಶನ್ʼ ಎಂಬ ಎನ್‌ಜಿಒ ಅನ್ನು ನೋಂದಾಯಿಸಿದ್ದಾರೆ.
ಈಗ ಇವರ ಗುರಿ ಹಳ್ಳಿಗಳತ್ತ ನೆಟ್ಟಿದೆ. ಗುಜರಾತ್‌ನ ಮೊಡಾಸಾ ಬಳಿಯ ಭೇರುಂಡಾ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ 200 ಪುಸ್ತಕಗಳಿರುವ ಮೊದಲ ಗ್ರಾಮೀಣ ಗ್ರಂಥಾಲಯವನ್ನ ಈಗಾಗಲೇ ತೆರೆದಿದ್ದಾರೆ. ತಮ್ಮ ಊರು ಬಿಟ್ಟು ಹೊರಗೆ ಹೋಗದ ಹಳ್ಳಿಯ ಜನರಿಗೆ ಪುಸ್ತಕಗಳ ಮೂಲಕ ಇಡೀ ಪ್ರಪಂಚವನ್ನ ಪರಿಚಯಿಸುವ ಕನಸು ಇವರದ್ದಾಗಿದೆ.


Click it and Unblock the Notifications
