Aadhaar update: ನೀವೇ ನಿಮ್ಮ ಆಧಾರ್ ವಿಳಾಸ, ಫೋನ್ ನಂಬರ್ ಬದಲಿಸುವುದು ಹೇಗೆ?
ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) "ಇ-ಆಧಾರ್" ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಹೊರತರಲು ಸಿದ್ಧತೆ ನಡೆಸುತ್ತಿದೆ. ಈ ಅಪ್ಲಿಕೇಶನ್ ನಾಗರಿಕರಿಗೆ ತಮ್ಮ ಆಧಾರ್ ಮಾಹಿತಿಯನ್ನು ತಾವೇ ನವೀಕರಿಸಲು ಸುಲಭ ಮತ್ತು ಸುರಕ್ಷಿತ ಮಾರ್ಗವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಪ್ರಕ್ರಿಯೆ ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಈ ಅಪ್ಲಿಕೇಶನ್ ಬಳಸುವ ಮೂಲಕ ಮೊಬೈಲ್ ನಂಬರ್, ವಿಳಾಸ, ಜನ್ಮದಿನಾಂಕ ಸೇರಿದಂತೆ ವೈಯಕ್ತಿಕ ವಿವರಗಳನ್ನು ನವೀಕರಿಸಬಹುದು. ಹಿಂದಿನಂತೆ ಯಾವುದೇ ಸಣ್ಣ ಬದಲಾವಣೆಗಳಿಗಾಗಿ ಜನರು ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ.

ಈಗ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಭೌತಿಕ ದಾಖಲೆಗಳನ್ನು ಪ್ರಸ್ತುತಪಡಿಸಬೇಕಿದೆ. ಪ್ರಸ್ತುತ ಆಧಾರ್ ವಿವರಗಳಲ್ಲಿ ಜನ್ಮ ದಿನಾಂಕ, ಹೆಸರು ಅಥವಾ ವಿಳಾಸ ಬದಲಾವಣೆ ಮಾಡಲು ಸಾರ್ವಜನಿಕರು ಆಧಾರ್ ಕೇಂದ್ರಗಳಿಗೆ ಭೇಟಿ ನೀಡಬೇಕು. ಈ ಅಪ್ಲಿಕೇಶನ್ ಬಂದ ನಂತರ ನೀವೇ ನಿಮ್ಮ ಮೊಬೈಲ್‌ನಲ್ಲಿ ಸುಲಭವಾಗಿ ಈ ಬದಲಾವಣೆಗಳನ್ನ ಮಾಡಿಕೊಳ್ಳಬಹುದು.
ಈ ಇ-ಆಧಾರ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಹೊರತರಲಾಗುತ್ತಿದೆ. ಅಪ್ಲಿಕೇಶನ್‌ನಲ್ಲಿ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಜನ ಮನೆಯಿಂದ ಹೊರಹೋಗದೆ, ಅಥವಾ ಕೇಂದ್ರಗಳಿಗೆ ಭೇಟಿ ನೀಡದೆ ತಮ್ಮ ವಿಳಾಸ, ಫೋನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಇನ್ನಿತರೆ ವೈಯಕ್ತಿಕ ವಿವರಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.
ವರದಿಗಳ ಪ್ರಕಾರ ಇ-ಆಧಾರ್ ಅಪ್ಲಿಕೇಶನ್ ಈ ವರ್ಷದ ಅಂತ್ಯದ ವೇಳೆಗೆ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಡಿಜಿಲಾಕರ್ ಮತ್ತು ಉಮಂಗ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಪೂರಕವಾಗಿರುತ್ತದೆ. ಭದ್ರತೆ ಹಾಗೂ ತಂತ್ರಜ್ಞಾನವನ್ನು ವಿಲೀನಗೊಳಿಸುವ ಮೂಲಕ ಇ-ಆಧಾರ್ ಅಪ್ಲಿಕೇಶನ್ ಡಿಜಿಟಲ್ ಇಂಡಿಯಾದ ಪ್ರಸ್ತುತಿ ಎಂದು ಹೇಳಲಾಗುತ್ತಿದೆ.
ಯಾವುದಕ್ಕೆ ಎಷ್ಟು ಶುಲ್ಕ?
ನವೆಂಬರ್ 1ರಿಂದ ಜಾರಿಗೆ ಬರುವಂತೆ ಆಧಾರ್ ಸೇವೆಗಳಿಗೆ ಯುಐಡಿಎಐ ಹೊಸ ಶುಲ್ಕ ಪರಿಷ್ಕರಣೆ ಮಾಡಿದೆ.
ಹೆಸರು, ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಿಸಲು 75 ರೂಪಾಯಿ, ಬೆರಳಚ್ಚು, ಐರಿಸ್ ಸ್ಕ್ಯಾನ್ ಅಥವಾ ಫೋಟೋ ಬಯೋಮೆಟ್ರಿಕ್ಸ್ ಅಪ್‌ಡೇಟ್‌ಗೆ 125 ರೂಪಾಯಿ, 5-7 ವರ್ಷ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣಗಳು ಉಚಿತ.
ಪ್ಯಾನ್‌ಕಾರ್ಡ್-ಆಧಾರ್ ಲಿಂಕ್‌ಗೆ ಡೆಡ್‌ಲೈನ್
ಹೊಸ ಮಾರ್ಗಸೂಚಿಗಳ ಪ್ರಕಾರ ಡಿಸೆಂಬರ್ 31ರೊಳಗೆ ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್-ಪ್ಯಾನ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಮಾಡದಿದ್ದರೆ ಜನವರಿ 1ರಿಂದಲೇ ನಿಮ್ಮಕ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಅಲ್ಲದೆ ಎಲ್ಲ ತೆರಿಗೆ ಮತ್ತು ಹಣಕಾಸು ವಹಿವಾಟುಗಳಿಗೆ ಅಮಾನ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹೊಸ ಪ್ಯಾನ್ ಕಾರ್ಡ್ ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಆಧಾರ್ ಆಧಾರಿತ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.












Click it and Unblock the Notifications