Gen-Z ಜಮಾನ: ತಮಿಳುನಾಡಿನಲ್ಲಿ ವಿಜಯ್ ಗೆಲುವಿನ ಹಿಂದೆ ಜೆನ್ ಝೀ ಮ್ಯಾಜಿಕ್, ಕರ್ನಾಟಕಕ್ಕೂ ಆದೀತೆ ಇದು ದಿಕ್ಸೂಚಿ
ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ. ದಶಕಗಳಿಂದ ಬೇರೂರಿದ್ದ ದ್ರಾವಿಡ ಪಕ್ಷಗಳ (ಡಿಎಂಕೆ ಮತ್ತು ಎಐಎಡಿಎಂಕೆ) ಕೋಟೆಯನ್ನು ಭೇದಿಸಿ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭಾರಿ ಮುನ್ನಡೆ ಸಾಧಿಸಿದೆ. ವಿಜಯ್ ಅವರ ಈ ಐತಿಹಾಸಿಕ ಸಾಧನೆಯ ಹಿಂದಿರುವ ಅತಿ ದೊಡ್ಡ ಶಕ್ತಿಯೇ 'ಜೆನ್ ಝೀ'. ಅಂದರೆ ಹೊಸ ತಲೆಮಾರಿನ ಮತದಾರರು. 1997 ರಿಂದ 2007 ರ ನಡುವೆ ಜನಿಸಿದವರನ್ನು ಜೆನ್ ಝೀ ತಲೆಮಾರು ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕ ರಾಜಕಾರಣದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಈ ಯುವ ಸಮೂಹ, ಈಗ ಪ್ರಜಾಪ್ರಭುತ್ವದ ಹೊಸ ಕಿಂಗ್ ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ.
ವಿಜಯ್ ಗೆಲುವಿನಲ್ಲಿ ಜೆನ್ ಝೀ ಪಾತ್ರವೇನು?
ತಮಿಳುನಾಡು ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.73 ಕೋಟಿ. ಈ ಪೈಕಿ ಮೊದಲ ಬಾರಿ ಮತ ಚಲಾಯಿಸಿದವರ ಸಂಖ್ಯೆ ಒಂದು ಕೋಟಿಗೂ ಹೆಚ್ಚು ಇತ್ತು ಎಂದು ವರದಿಗಳು ಹೇಳುತ್ತವೆ. ಇದರಲ್ಲಿ ಶೇ 90ರಷ್ಟು ಮಂದಿ 'ಜೆನ್ ಝೀ' ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಹಳೆಯ ರಾಜಕೀಯ ಸಿದ್ಧಾಂತಗಳು, ಭ್ರಷ್ಟಾಚಾರದ ಆರೋಪಗಳು ಹಾಗೂ ಆಡಳಿತ ವಿರೋಧಿ ಅಲೆಯಿಂದ ಬೇಸತ್ತಿದ್ದ ಈ ಯುವ ಸಮೂಹಕ್ಕೆ ಒಂದು ಪರ್ಯಾಯ ನಾಯಕತ್ವದ ಅಗತ್ಯವಿತ್ತು. ಹಳೆಯ ತಲೆಮಾರಿನ ಮತದಾರರಂತೆ ಇವರು ಜಾತಿ, ಧರ್ಮ ಅಥವಾ ಸಾಂಪ್ರದಾಯಿಕ ರಾಜಕೀಯ ಭರವಸೆಗಳಿಗೆ ಮಾರುಹೋಗುವವರಲ್ಲ. ಬದಲಾಗಿ, ನಾಯಕತ್ವದಲ್ಲಿ ಹೊಸತನ, ಪಾರದರ್ಶಕತೆ ಮತ್ತು ಡಿಜಿಟಲ್ ಸಂಪರ್ಕವನ್ನು ಬಯಸುವವರು.

ವಿಜಯ್ ನಿಖರವಾಗಿ ಇದೇ ವರ್ಗವನ್ನು ಗುರಿಯಾಗಿಸಿಕೊಂಡರು. ಹಳೆಯ ತಲೆಮಾರಿನ ನಾಯಕರಂತೆ ಜಾತಿ ಅಥವಾ ಧರ್ಮದ ಲೆಕ್ಕಾಚಾರಗಳಿಗಿಂತ, ಯುವಕರ ಆಕಾಂಕ್ಷೆಗಳಿಗೆ ಅವರು ಧ್ವನಿಯಾದರು.
ಇನ್‌ಸ್ಟಾಗ್ರಾಮ್ ಪ್ರಚಾರದ ಪವರ್
ವಿಜಯ್ ಅವರ ಚುನಾವಣಾ ಪ್ರಚಾರದ ಶೈಲಿ ಸಂಪೂರ್ಣ ವಿಭಿನ್ನವಾಗಿತ್ತು. ಬೃಹತ್ ಸಮಾವೇಶಗಳಿಗಿಂತ ಹೆಚ್ಚಾಗಿ, ಅವರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜೆನ್ ಝೀಗಳನ್ನು ತಲುಪಿದರು. ಈ ಯುವ ಸಮೂಹವು ದಿನದ ಬಹುಪಾಲು ಸಮಯವನ್ನು ಮೊಬೈಲ್ ಪರದೆಯ ಮೇಲೆಯೇ ಕಳೆಯುತ್ತದೆ. ವಿಜಯ್ ಅವರ ಚಿಕ್ಕದಾದ, ಆಕರ್ಷಕ ರೀಲ್ಸ್‌ಗಳು, ನೇರ ನುಡಿಗಳು ಮತ್ತು ಡಿಜಿಟಲ್ ಕ್ಯಾಂಪೇನ್‌ಗಳು ಯುವಕರ ಮೊಬೈಲ್‌ಗಳನ್ನು ನೇರವಾಗಿ ತಲುಪಿದವು. ಇದು ಸಾಂಪ್ರದಾಯಿಕ ಭಾಷಣಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಡಿಜಿಟಲ್ ಕನೆಕ್ಟ್ ಮೂಲಕ ವಿಜಯ್ ಯುವಕರ 'ಟ್ರೆಂಡ್' ಆಗಿ ಬದಲಾದರು.
ಕರ್ನಾಟಕದ ರಾಜಕೀಯ ಭವಿಷ್ಯದ ಮೇಲೇನು ಪ್ರಭಾವ?
ತಮಿಳುನಾಡಿನ ಈ 'ಜೆನ್ ಝೀ' ಕ್ರಾಂತಿಯು ನೆರೆಯ ಕರ್ನಾಟಕದ ಭವಿಷ್ಯದ ರಾಜಕೀಯಕ್ಕೂ ಒಂದು ಸ್ಪಷ್ಟ ಮುನ್ಸೂಚನೆಯಾಗಿದೆ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಂತಹ ನಗರ ಪ್ರದೇಶಗಳಲ್ಲಿ ಯುವ ಮತದಾರರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಈ ಹೊಸ ಮತದಾರರ ಪ್ರಾಬಲ್ಯ ಹೆಚ್ಚಾದರೆ, ಕರ್ನಾಟಕದ ಸಾಂಪ್ರದಾಯಿಕ ರಾಜಕೀಯ ಸಮೀಕರಣಗಳು ಬುಡಮೇಲಾಗುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕದ ರಾಜಕಾರಣ ಪ್ರಸ್ತುತ ಜಾತಿ ಸಮೀಕರಣ, ಹಣಬಲ ಮತ್ತು ಹಳೆಯ ನಾಯಕರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಆದರೆ, ಭವಿಷ್ಯದಲ್ಲಿ ಜೆನ್ ಝೀ ಮತದಾರರು ನಿರ್ಣಾಯಕರಾದಾಗ ಈ ಸಾಂಪ್ರದಾಯಿಕ ತಂತ್ರಗಳು ಮಣ್ಣುಮುಕ್ಕುವ ಸಾಧ್ಯತೆಯಿದೆ. ಕರ್ನಾಟಕದ ರಾಜಕೀಯ ಪಕ್ಷಗಳು ಕೇವಲ ಜಾತಿ ಲೆಕ್ಕಾಚಾರ ಅಥವಾ ಉಚಿತ ಯೋಜನೆಗಳನ್ನು ನೆಚ್ಚಿಕೊಳ್ಳುವ ಬದಲು, ಯುವಕರಿಗೆ ಉದ್ಯೋಗ, ಗುಣಮಟ್ಟದ ಶಿಕ್ಷಣ, ನವೋದ್ಯಮ (ಸ್ಟಾರ್ಟ್ಅಪ್) ಬೆಂಬಲ, ಮೂಲಸೌಕರ್ಯ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಬೇಕಿದೆ ಹೊರತು, ಭಾವನಾತ್ಮಕ ವಿಚಾರಗಳಲ್ಲ.
ತಮಿಳುನಾಡಿನಲ್ಲಿ ವಿಜಯ್ ಮಾಡಿದಂತೆ, ಕರ್ನಾಟಕದಲ್ಲೂ ಯಾವ ನಾಯಕ ಅಥವಾ ಪಕ್ಷ ಸಾಮಾಜಿಕ ಜಾಲತಾಣಗಳ ಮೂಲಕ 'ಜೆನ್ ಜಿ' ಯುವಕರನ್ನು ಯಶಸ್ವಿಯಾಗಿ ತಲುಪುತ್ತದೆಯೋ, ಅವರೇ ಭವಿಷ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಒಟ್ಟಿನಲ್ಲಿ, ಯುವ ಮತದಾರರು ಕೇವಲ ಮತಬ್ಯಾಂಕ್ ಅಲ್ಲ, ಭವಿಷ್ಯದ 'ಕಿಂಗ್ ಮೇಕರ್ಸ್' ಎಂಬುದು ಸಾಬೀತಾಗುತ್ತಿದೆ.












Click it and Unblock the Notifications