Manipur: ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ- ಆರೋಪಿ ಮನೆಗೆ ಬೆಂಕಿ!
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಗುಂಪೊಂದು ವಿವಸ್ತ್ರಗೊಳಿಸಿಗಿ ಮೆರವಣಿಗೆ ಮಾಡುತ್ತಿರುವ ವೀಡಿಯೊ ವೈರಲ್ ಆದ ಎರಡು ದಿನಗಳ ನಂತರ, ಪ್ರಮುಖ ಆರೋಪಿ ಹುಯಿರೆಮ್ ಹೆರೋದಾಸ್ ಮೈತೆಯ್ ಅವರ ಮನೆಯನ್ನು ಗುರುವಾರ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ದೃಶ್ಯಗಳಲ್ಲಿ ಪ್ರತಿಭಟನಾಕಾರರ ಗುಂಪು ಆರೋಪಿಯ ಮನೆಗೆ ಬೆಂಕಿ ಹಚ್ಚುವುದು ಕಂಡು ಬಂದಿದೆ.
ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಕಾದಾಡುತ್ತಿರುವ ಸಮುದಾಯವೊಂದರ ಮಹಿಳೆಯರನ್ನು ಇನ್ನೊಂದು ಕಡೆಯಿಂದ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ 4 ಮಂದಿ ಬಂಧಿಸಲಾಗಿದೆ.

ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಈ ಘಟನೆ ನಡೆದು ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಬ್ಬರು ಮಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಆದರೆ ಬುಧವಾರವಷ್ಟೇ ಈ ಭಯಾನಕ ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಈ ವಿಡಿಯೋ ವೈರಲ್ ಆದ ಕೂಡಲೇ ದೇಶಾದ್ಯಂತ ಆಕ್ರೋಶ ಹೆಚ್ಚಾಗಿದೆ.
ವಿಡಿಯೋವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡ ಮಣಿಪುರ ಪೊಲೀಸರು ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ವಿರುದ್ಧ ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಗುರುವಾರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಮತ್ತು ಸಂಭವನೀಯ ಮರಣದಂಡನೆ ಸೇರಿದಂತೆ ಕಠಿಣ ಕ್ರಮವನ್ನು ಅನುಸರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮೇ 3 ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮಣಿಪುರ ಹಿಂಸಾಚಾರ
ಘಟನೆಯ ದಿನ ಸುಮಾರು 800 ರಿಂದ 1,000 ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು ಗ್ರಾಮವೊಂದಕ್ಕೆ ನುಗ್ಗಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಮನೆಗಳನ್ನು ಸುಟ್ಟು ಹಾಕಿದ್ದರು. ಈ ವೇಳೆ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಅರಣ್ಯಕ್ಕೆ ಓಡಿಹೋದರು. ನಂತರ ಅವರನ್ನು ನಾಂಗ್‍ಪೋಕ್ ಸೆಕ್ಮೈ ಪೊಲೀಸ್ ತಂಡವು ರಕ್ಷಿಸಿತ್ತು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ದಾಳಿಕೋರರ ಗುಂಪು ಅಪಹರಿಸಿತ್ತು. ದುಷ್ಕರ್ಮಿಗಳು ಮೇಟಿ (Meitei) ಸಂಘಟನೆಗಳ ಸದಸ್ಯರು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‍ಐಆರ್‌ನಲ್ಲಿ ದಾಖಲಾದ ಮಾಹಿತಿ ಪ್ರಕಾರ ಮಹಿಳೆಯರಿಗೆ ತಮ್ಮ ಬಟ್ಟೆಗಳನ್ನು ತೆಗೆಯುವಂತೆ ದಾಳಿಕೋರರು ಒತ್ತಾಯಿಸಿದ್ದಾರೆ. ಈ ವೇಳೆ ಮಹಿಳೆಯ ಸಹೋದರ ತಡೆಯಲು ಪ್ರಯತ್ನಿಸಿದಾಗ ಆತನನ್ನು ಕೊಲೆ ಮಾಡಲಾಗಿದೆ. ಬಳಿಕ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.












Click it and Unblock the Notifications