• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಲಿಂಗಕಾಮಕ್ಕೆ ಫುಲ್ ಸ್ಟಾಪ್ : ಸಲಿಂಗಕಾಮಿಗಳ ಸಿಡಿಮಿಡಿ

By Prasad
|

ಬೆಂಗಳೂರು, ಡಿ. 11 : ಸಲಿಂಗಕಾಮ ಕಾನೂನು ಬಾಹಿರ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿರುವುದಕ್ಕೆ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸರ್ವಧರ್ಮ ಸಂಘಟನೆಗಳು ಈ ತೀರ್ಪನ್ನು ಮುಕ್ತಕಂಠದಿಂದ ಹೊಗಳಿದ್ದರೆ, ಎಲ್‌ಜಿಬಿಟಿ ಕಮ್ಯೂನಿಟಿಯ ಬೆಂಬಲಿಗರು ಇದು ಲೈಂಗಿಕ ಸ್ವಾತಂತ್ರದ ಹರಣ ಎಂದು ಕೂಗೆಬ್ಬಿಸಿವೆ.

ಸಲಿಂಗಕಾಮವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಯೋಗಗುರು ಬಾಬಾ ರಾಮದೇವ್ ಅವರು, ಸಲಿಂಗಕಾಮ ಒಂದು ರೋಗ ಎಂದು ಬಣ್ಣಿಸಿದ್ದಾರೆ. ಬೇಕಿದ್ದರೆ ಪುರುಷ ಸಲಿಂಗಕಾಮಿಗಳು ನನ್ನ ಆಶ್ರಮಕ್ಕೆ ಬರಲಿ ಅವರಿಗಂಟಿರುವ ರೋಗವನ್ನು ನಾನು ಗುಣಪಡಿಸುತ್ತೇನೆ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ಇಂದು ಸಲಿಂಗಕಾಮದ ಬಗ್ಗೆ ಮಾತನಾಡುತ್ತಿದ್ದಾರೆ, ನಾಳೆ ಪ್ರಾಣಿಗಳೊಂದಿಗೆ ಸಂಭೋಗಿಸುವ ಮಾತನಾಡುತ್ತಾರೆ ಎಂದು ದೆಹಲಿ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದವರಲ್ಲಿ ಒಬ್ಬರಾಗಿರುವ ಬಾಬಾ ರಾಮದೇವ್ ವ್ಯಂಗ್ಯವಾಡಿದ್ದಾರೆ. ಸಲಿಂಗ ಕಾಮಿಗಳಿಂದ ವಿಜ್ಞಾನ ಅಥವಾ ಆರ್ಥಿಕ ಕ್ಷೇತ್ರಕ್ಕೆ ಯಾವುದೇ ಲಾಭವಾಗಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ಐಪಿಸಿಯ 377ನೇ ಸೆಕ್ಷನ್ ಸಲಿಂಗಕಾಮಿಗಳ ಲೈಂಗಿಕತೆ ಅಸ್ವಾಭಾವಿಕ ಎಂದು ವಿವರಿಸಿದ್ದು, ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, 2009ರ ಜುಲೈ 2ರಂದು ದೆಹಲಿ ಹೈಕೋರ್ಟ್, ಸಲಿಂಗಕಾಮಕ್ಕೆ ಕಾನೂನಿನ ಮಾನ್ಯತೆ ಒದಗಿಸಿಕೊಟ್ಟಿತ್ತು, ಸಲಿಂಗ ಕಾಮ ಅಪರಾಧವಲ್ಲ, ಅನೈತಿಕವಲ್ಲ ಎಂದು ತೀರ್ಪನ್ನು ನೀಡಿತ್ತು. [ಸಲಿಂಗಕಾಮ ಅಪರಾಧ : ಸುಪ್ರೀಂ ಕೋರ್ಟ್]

ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಸ್ತ್ರೀ, ಪುರುಷ, ದ್ವಿಲಿಂಗಿ ಮತ್ತು ನಪುಂಸಕ (ಎಲ್‌ಜಿಬಿಟಿ) ಸಮುದಾಯದವರು ಕೆರಳಿನಿಂತಿದ್ದಾರೆ. ಸಲಿಂಗಕಾಮಕ್ಕೆ ಕಾನೂನು ಮಾನ್ಯತೆ ದೊರೆಯಬೇಕೆಂದು ಹೋರಾಟ ನಡೆಸಿರುವ ಅಶೋಕ್ ರಾವ್ ಕವಿ ಅವರು, ಈ ತೀರ್ಪನ್ನು ನಾವು ಖಂಡಿತ ಸ್ವೀಕರಿಸುವುದಿಲ್ಲ, ಇದರ ವಿರುದ್ಧ ಖಂಡಿತ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.

ಈ ತೀರ್ಪನ್ನು ನೀಡುವ ಸಂದರ್ಭದಲ್ಲಿ, ನಿಮಗೆ ತಾಕತ್ತಿದ್ದರೆ ಸಲಿಂಗಕಾಮಕ್ಕೆ ಸಂಬಂಧಿಸಿದ ಕಾನೂನನ್ನೇ ಬದಲಾಯಿಸಿ ಎಂದು ಕೇಂದ್ರ ಸರಕಾರಕ್ಕೇ ನ್ಯಾಯಮೂರ್ತಿ ಸಾಂಘ್ವಿ ಸವಾಲು ಎಸೆದಿದ್ದಾರೆ. ಟ್ವಿಟ್ಟರಿನಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಲವಾರು ಜನರು ತಮಗೆ ಅನಿಸಿದಂತೆ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಕಬೀರ್ ಬೇಡಿ

ಸರ್ವೋಚ್ಚ ನ್ಯಾಯಾಲಯ ಲೈಂಗಿಕ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯದಿದ್ದುದು ನಿಜಕ್ಕೂ ದುರಾದೃಷ್ಟಕರ.

ವೋಟ್ ಬ್ಯಾಂಕ್ ಆಗಬೇಕು : ಲತಾ ವರ್ಮಾ

ಲೈಂಗಿಕ ಅಲ್ಪಸಂಖ್ಯಾತರೆ ಮೊದಲು ನಿಮ್ಮ ಸಂಖ್ಯೆಯನ್ನು ಬಲಪಡಿಸಿಕೊಳ್ಳಿ, ನಂತರ ಹಕ್ಕಿಗಾಗಿ ಹೋರಾಡಿರಿ. ನಿಮ್ಮ ಮಾತು ಕೇಳಬೇಕಿದ್ದರೆ ನೀವು ವೋಟ್ ಬ್ಯಾಂಕ್ ಆಗಬೇಕು.

ರಾಮದೇವ್ ಒಬ್ಬ ಮಾಸ್ಟರ್ ಸೇಲ್ಸ್ ಮನ್

ಬಾಬಾ ರಾಮದೇವ್ ಮೊದಲು ಗರ್ಭಿಣಿಯರಿಗೆ ಔಷಧಿ ಕೊಟ್ಟು ಗಂಡು ಮಗುವಾಗುವಂತೆ ಮಾಡುತ್ತಾರೆ, ನಂತರ ಪುರುಷ ಸಲಿಂಗಕಾಮಿಗಳ ರೋಗ ಗುಣಪಡಿಸುತ್ತೇನೆನ್ನುತ್ತಾರೆ. ಮಾಸ್ಟರ್ ಸೇಲ್ಸ್ ಮನ್!

ಪೂನಂ ಪಾಂಡೆ ಏನಂತಾರೆ ಗೊತ್ತಾ?

ಮೂಲಭೂತ ಹಕ್ಕು ಉಲ್ಲಂಘನೆಯಾಗದಿದ್ದರೆ ನಮ್ಮ ಬೆಡ್ ರೂಂನಲ್ಲಿ ಮಾಡಲು ಸರಕಾರಕ್ಕೇನು ಕೆಲಸವಿರುತ್ತದೆ? ಅಲ್ಲದೆ ಖಜುರಾಹೋದಲ್ಲಿನ ಕೆತ್ತನೆಗಳನ್ನು ನಾಶ ಮಾಡಲು ಅವರಿಂದ ಸಾಧ್ಯವೆ?

ಕಾನೂನು ಬಾಹಿರ ಅಲ್ಲ : ಓಮರ್ ಅಬ್ದುಲ್ಲ

ಧಾರ್ಮಿಕ ಅಥವಾ ನೈತಿಕ ನಂಬಿಕೆಯ ತಳಹದಿ ಮೇಲೆ ಜನರು ಏನನ್ನಾದರೂ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ, ಸಲಿಂಗಕಾಮವನ್ನು ಕಾನೂನು ಬಾಹಿರ ಅನ್ನುವುದು ಸರಿಯಲ್ಲ.

ಸುಪ್ರೀಂಕೋರ್ಟ್ ನಿಂದ ಎಂಥಾ ಶಾಕ್

ದೆಹಲಿ ಹೈಕೋರ್ಟ್ ನೀಡಿದ್ದ ದೂರದರ್ಶಿತ್ವದ ತೀರ್ಪನ್ನು ತಳ್ಳಿಹಾಕಲಾಗಿದೆ. ಸಲಿಂಗಕಾಮವನ್ನು ಅಪರಾಧ ಎನ್ನುವುದು ಅವರ ಸ್ವಾತಂತ್ರ್ಯವನ್ನೇ ಕಿತ್ತುಹಾಕಿದಂತಾಗುತ್ತದೆ - ಸಾಗರಿಕಾ ಘೋಷ್.

ಚಿತ್ರನಟಿ ಸೆಲೀನಾ ಜೇಟ್ಲಿ

ದೇಶದ ಎಲ್ಲರಿಗೂ ಎಲ್ಲ ಹಕ್ಕು ಸಿಗಬೇಕು ಎಂಬ ಸುಪ್ರೀಂ ಕೋರ್ಟ್ ನ ಅಭಿಮತವನ್ನು ಸರ್ವೋಚ್ಚ ನ್ಯಾಯಾಲಯವೇ ಸೋಲಿಸಿದೆ.

ಪೊಲೀಸರು ಬೆಡ್ ರೂಂ ಮೇಲೆ ದಾಳಿ ಮಾಡಲಿ

ಹಾಹಾಹಾ ಹೋಹೋಹೋ. ನನಗೆ ಅಚ್ಚರಿಯಾಗುತ್ತಿದೆ. ಇನ್ನು ಮುಂದೆ ಪೊಲೀಸರು ಬೆಡ್ ರೂಂ ಮೇಲೆಯೇ ದಾಳಿ ಮಾಡಬೇಕಾಗುತ್ತದೆ.

ದಯವಿಟ್ಟು ಕೈ ಎತ್ತಿ ಪ್ಲೀಸ್

ಇನ್ನು ಎಷ್ಟು ಜನರು ಸಲಿಂಗಕಾಮಿಗಳಿಗೆ ತಮ್ಮ ಅಪಾರ್ಟ್ಮೆಂಟ್ ಬಾಡಿಗೆ ನೀಡುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದೇನೆ.

ಸ್ನೇಹಾ ಮೆನನ್ ಉವಾಚ

ಈ ದೇಶದಲ್ಲಿ ಅತ್ಯಾಚಾರಿಗಳು ಬಿಂದಾಸ್ ಆಗಿ ಅಡ್ಡಾಡುತ್ತಿರುತ್ತಾರೆ. ಆದರೆ, ಇಬ್ಬರು ಪರಸ್ಪರ ಪ್ರೀತಿಸುವ ಸಲಿಂಗಕಾಮಿಗಳು ಅಪರಾಧಿಗಳಂತೆ ಕಾಣಿಸುತ್ತಾರೆ. ಶಭಾಷ್ ಇಂಡಿಯಾ!

English summary
Supreme Court of India judgement on homosexuality. Reaction by LGBT community and supporters on twitter. Baba Ramdeve who opposed homosexuality calls it a disease and has invited them to come to his ashram for the cure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X