ಗ್ರೀನ್ ಪೀಸ್ ಮೇಲೆ ಆರ್ಥಿಕ ದಿಗ್ಬಂಧನ
ನವದೆಹಲಿ, ಜೂ.20: ವಿದೇಶದಿಂದ ಹಣ ಪಡೆದು ದೇಶದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸುವ ಆರೋಪಕ್ಕೆ ತುತ್ತಾಗಿರುವ ಸರ್ಕಾರೇತರ ಸಂಘಟನೆ ಗ್ರೀನ್‌ಪೀಸ್ ಮೇಲೆ ಕೇಂದ್ರ ಸರ್ಕಾರ 'ಆರ್ಥಿಕ ಕಡಿವಾಣ' ಹೇರಲು ಮುಂದಾಗಿದೆ.
ಗ್ರೀನ್‌ಪೀಸ್ ಇಂಟರ್‌ನ್ಯಾಷನಲ್ ಮತ್ತು 'ಕ್ಲೈಮೇಟ್ ವರ್ಕ್ಸ್ ಫೌಂಡೇಷನ್' ವಿದೇಶಿ ಸಂಸ್ಥೆಗಳಿಂದ ಗ್ರೀನ್‌ಪೀಸ್ ಇಂಡಿಯಾಕ್ಕೆ ಬರುವ ಹಣವನ್ನು, ಈ ಸಂಸ್ಥೆಗೆ ವರ್ಗಾಯಿಸುವ ಮುನ್ನ ತನ್ನ ಅನುಮತಿಯನ್ನು ಪಡೆಯುವಂತೆ ಕೇಂದ್ರ ಗೃಹ ಸಚಿವಾಲಯವು ಆರ್‌ಬಿಐಗೆ ನಿರ್ದೇಶನ ನೀಡಿದೆ.
ವಿದೇಶಿ ನೆರವು ಪಡೆದು ದೇಶದ ಪ್ರಮುಖ ಯೋಜನೆಗಳಿಗೆ ಗ್ರೀನ್‌ಪೀಸ್ ಅಡ್ಡಿ ಉಂಟು ಮಾಡುತ್ತಿದೆ. ಹೀಗಾಗಿ ಅದಕ್ಕೆ ವಿದೇಶಿ ಹಣ ಹರಿದುಬರುವುದನ್ನು ತಡೆಯಬೇಕು ಎಂದು ಗುಪ್ತಚರ ಇಲಾಖೆ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಗುಪ್ತಚರ ಇಲಾಖೆ ವರದಿ ಆಧರಿಸಿ ಕೇಂದ್ರ ಸರ್ಕಾರ ತನ್ನ ವಿರುದ್ಧ ಕೈಗೊಂಡ ಕ್ರಮವನ್ನು 'ರಬ್ಬಿಶ್' ಎಂದು ಗ್ರೀನ್‌ಪೀಸ್ ಇಂಡಿಯಾ ತಳ್ಳಿ ಹಾಕಿದೆ. ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಅಣು ಸ್ಥಾವರಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿವೆ. ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಕೇಂದ್ರ ಸರ್ಕಾರ ಮಾಡುತ್ತಿವೆ. ನಮಗೆ ವಿದೇಶಿ ಸಂಸ್ಥೆಗಳಿಂದ ಹಣದ ಅವಶ್ಯಕತೆಯಿಲ್ಲ. ದೇಶದಲ್ಲಿ ಜನಪರ ಕೆಲಸ ಮಾಡುವಷ್ಟು ಹಣ ಭಾರತದಲ್ಲೇ ಸಂಗ್ರವಾಗುತ್ತಿದೆ ಎಂದು ಗ್ರೀನ್‌ಪೀಸ್ ಇಂಡಿಯಾ ವಕ್ತಾರೆ ಭಾರತಿ ಸಿನ್ಹಾ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ನೋಟಿಸ್:
ರಹಸ್ಯ ವರದಿ ಸೋರಿಕೆ ಮಾಡುವ ಮೂಲಕ ಗುಪ್ತಚರ ಇಲಾಖೆ ತಮ್ಮ ಮಾನ ಹಾನಿ ಮಾಡಿದೆ ಎಂದು ಆರೋಪಿಸಿ, ಗೃಹ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೂಡಂಕುಳಂ ಪರಮಾಣು ಘಟಕ ವಿರೋಧಿ ಹೋರಾಟಗಾರ ಉದಯಕುಮಾರ್, ಕೇಂದ್ರ ಗೃಹ ಸಚಿವಾಲಯಕ್ಕೆ ಮಾನನಷ್ಟ ನೋಟಿಸ್ ಜಾರಿ ಮಾಡಿದ್ದಾರೆ. ಉದಯಕುಮಾರ್ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಕನ್ಯಾಕುಮಾರಿಯಿಂದ ಸ್ಪರ್ಧಿಸಿ ಸೋತಿದ್ದರು.
ಭಾರತದ ಗ್ರೀನ್‌ಪೀಸ್ ಸಂಘಟನೆಯ ಮುಂದಿನ ಟಾರ್ಗೆಟ್ ದೇಶೀಯ ಐಟಿ ಕಂಪೆನಿಗಳು. ಈ ಕಂಪೆನಿಗಳ ಇ ತ್ಯಾಜ್ಯ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲು ತಯಾರಿ ನಡೆಸುತ್ತಿದೆ ಎನ್ನವ ಮಾಹಿತಿಯನ್ನು ಐಬಿ ಗೃಹ ಇಲಾಖೆಗೆ ಸಲ್ಲಿಸಿತ್ತು. ಈ ಮಾಹಿತಿಗೆ ಪುಷ್ಠಿ ನೀಡುವಂತೆ ಗ್ರೀನ್ ಪೀಸ್ ಇಂಡಿಯಾ ಇ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಒಂದು ಸುದ್ದಿಯನ್ನು ಗುರುವಾರ ತನ್ನ ಫೇಸ್‌ಬುಕ್ ವಾಲ್‌ನಲ್ಲಿ ಪ್ರಕಟಿಸಿದೆ. [ಸ್ವದೇಶಿ ಐಟಿ ಕಂಪೆನಿಗಳ ಮೇಲೆ ಗ್ರೀನ್‌ಪೀಸ್ ಕಣ್ಣು!]












Click it and Unblock the Notifications