KFC: ಶ್ರಾವಣ ಮಾಸದಲ್ಲಿ ಕೆಎಫ್‌ಸಿ ಮಳಿಗೆಗಳು ಬಂದ್ ಆಗುತ್ತಾ?
ನಾನ್‌ವೆಜ್ ಪ್ರಿಯರ ನೆಚ್ಚಿನ ತಾಣಗಳಲ್ಲಿ ಕೆಎಫ್‌ಸಿ (KFC) ಕೂಡ ಒಂದು. ಅದರಲ್ಲೂ ಈಗಿನ ಕಾಲದ ಯುವಜನರು ಕೆಎಫ್‌ಸಿ ಮಳಿಗೆಗಳಲ್ಲಿ ಸದಾ ಬೀಡುಬಿಟ್ಟಿರುತ್ತಾರೆ. ಇನ್ನು ಯುವತಿಯರಿಗಂತೂ ಇಲ್ಲಿ ಸಿಗುವ ಬಗೆಬಗೆಯ ಚಿಕನ್ ಮೆನು ಅಂದ್ರೆ ಪಂಚಪ್ರಾಣ. ಮನೆಯಲ್ಲಿ ಮಾಮೂಲಿ ಚಿಕನ್ ಐಟಂಗಳನ್ನು ತಿಂದು ಸಾಕಾಗಿದೆ ಅಂತ, ಹತ್ತಿರ ಕೆಎಫ್‌ಸಿ ಮಳಿಗೆಗೆ ಹೋಗಿ ಕೂರುತ್ತಾರೆ. ಸದ್ಯ ಶ್ರಾವಣ ಮಾಸ ಕೂಡ ಶುರುವಾಗಿದೆ. ಇದೇ ಹೊತ್ತಿನಲ್ಲಿ ಕೆಎಫ್‌ಸಿ ಮಳಿಗೆಗಳು ಬಂದ್ ಆಗುವ ಸಾಧ್ಯತೆ ಇದೆ ಎಂಬ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಶ್ರಾವಣ ಮಾಸದ ಆಚರಣೆಯ ಭಾಗವಾಗಿ ಮಾಂಸಾಹಾರವನ್ನು ಒಂದು ತಿಂಗಳ ಕಾಲ ತಿನ್ನುವುದಿಲ್ಲ. ಅದನ್ನು ಮುಟ್ಟುವುದೂ ಇಲ್ಲ. ಹೀಗಾಗಿ ಮೊದಲಿನಿಂದಲೂ ಶ್ರಾವಣಕ್ಕೆ ಪವಿತ್ರ ಸ್ಥಾನವಿದೆ. ಹೆಚ್ಚಾಗಿ ಹಿಂದೂಗಳು ಶ್ರಾವಣಕ್ಕೆ ಹೆಚ್ಚಿನ ಸ್ಥಾನ ನೀಡುತ್ತಾರೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಕಾರಣಕ್ಕೆ ಶ್ರಾವಣ ಮುಗಿಯುವವರೆಗೆ ಚಿಕನ್, ಮಟನ್, ಮೀನು ಸೇರಿ ಎಲ್ಲ ರೀತಿಯ ಮಾಂಸಾಹಾರವನ್ನು ತ್ಯಜಿಸುತ್ತಾರೆ. ಆದರೆ ಹೊರಗಡೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಶ್ರಾವಣವಿದ್ದರೂ ಮಾಂಸದ ಖಾದ್ಯಗಳು ಸಿಗುತ್ತವೆ. ಈ ಕಾರಣಕ್ಕೆ ಮನೆಯಲ್ಲಿ ಮಾಡದಿದ್ದರೂ ಕದ್ದುಮುಚ್ಚಿ ಹೊರಗಡೆ ಹೋಗಿ ನಾನ್‌ವೆಜ್ ತಿಂದು ಬರುವವರಿದ್ದಾರೆ. ಇದರಲ್ಲಿ ಕೆಎಫ್‌ಸಿ ಕೂಡ ಒಂದು.

ಸಾಮಾನ್ಯವಾಗಿ ಹಬ್ಬಹರಿದಿನಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸುವ ನಿಯಮ ಕೆಲವೆಡೆ ಜಾರಿಯಲ್ಲಿದೆ. ಆದರೆ ಶ್ರಾವಣ ಮಾಸ ಬಂದಿರುವುದರಿಂದ ತಿಂಗಳಿಡೀ ಅಂಗಡಿಗಳನ್ನು ಮುಚ್ಚಬೇಕು, ಇಲ್ಲವೇ ಸಸ್ಯಾಹಾರ ಖಾದ್ಯಗಳನ್ನು ಮಾರಾಟ ಮಾಡುವಂತೆ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಏಕಾಏಕಿ ಕೆಎಫ್‌ಸಿ ಮಳಿಗೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, ಬಂದ್ ಮಾಡಿಸಿರುವ ಘಟನೆ ನಡೆದಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶ್ರಾವಣ ಮಾಸ ಶುರುವಾಗಿರುವ ಹಿನ್ನೆಲೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಾಂಸ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಕೆಎಫ್‌ಸಿಯ ಶಟರ್ ಅನ್ನು ಮುಚ್ಚುವಂತೆ ಒತ್ತಾಯಿಸಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಗಾಜಿಯಾಬಾದ್‌ನ ವಸುಂಧರಾ ಪ್ರದೇಶದಲ್ಲಿ, ಹಿಂದೂ ರಕ್ಷಾ ದಳದ ಸದಸ್ಯರು ಶ್ರಾವಣ ಸಮಯದಲ್ಲಿ ಕೆಎಫ್‌ಸಿ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿ, ಸಿಬ್ಬಂದಿಗೆ ಬೆದರಿಕೆ ಹಾಕಿ ಉದ್ವಿಗ್ನತೆ ಸೃಷ್ಟಿಸಿದ್ದಾರೆ.
ಸಸ್ಯಾಹಾರ ತಿಂಡಿ ಮಾತ್ರ ಇರಲಿ
ಪವಿತ್ರವಾದ ಶ್ರಾವಣದಲ್ಲಿ ಮಾಂಸ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಸದಸ್ಯರು ಎರಡು ಪ್ರಸಿದ್ಧ ತಿನಿಸುಗಳಾದ ಕೆಎಫ್‌ಸಿ ಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ಇದಕ್ಕೆ ಹೆದರಿ ಅವರು ಸಸ್ಯಾಹಾರ ತಿಂಡಿ ಮಾತ್ರ ಮಾರಾಟ ಮಾಡುವುದಾಗಿ ಬೋರ್ಡ್ ಕೂಡ ಹಾಕಿದ್ದಾರೆ. ಈ ಸಂಬಂಧ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

ಈ ನಡೆಯನ್ನು ಹಲವರು ಖಂಡಿಸಿದ್ದಾರೆ. ನಿಮ್ಮ ಆಚರಣೆ ಏನೇ ಇದ್ದರೂ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಇದು 21ನೇ ಶತಮಾನದ ಭಾರತ. ಜನರು ಏನು ತಿನ್ನುತ್ತಾರೆ? ಎಲ್ಲಿ ತಿನ್ನುತ್ತಾರೆ? ಏನು ಮಾರಾಟ ಮಾಡುತ್ತಾರೆ? ಎಲ್ಲಿ ಮಾರಾಟ ಮಾಡುತ್ತಾರೆ? ಇದೆಲ್ಲವೂ ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಅವಲಂಬಿಸಿರುತ್ತದೆಯೇ ಹೊರತು, ಜನರು ಮತ್ತು ಕಾನೂನಿನ ಆಯ್ಕೆಯ ಮೇಲೆ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೇ ಎಲ್ಲ ಕಡೆ ಮಾಡಲು ಬಂದರೆ ತಕ್ಕ ಉತ್ತರ ನಾವೂ ಕೊಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications