ʼಗ್ಯಾರಂಟಿʼಗಳಿಂದ ಲಾಸ್, ಎರಡು ತಿಂಗಳ ಸಂಬಳ ಕೊಡಲ್ಲ ಎಂದ ಸರ್ಕಾರ
ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಸರ್ಕಾರವು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಸರ್ಕಾರದ ಎಲ್ಲ ಸಚಿವರು ಹಾಗೂ ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ ಎರಡು ತಿಂಗಳು ಯಾವುದೇ ಸಂಬಳ ಅಥವಾ ಭತ್ಯೆ ಕೊಡಲ್ಲ ಎಂದು ಶಾಕ್ ನೀಡಿದೆ ಹಿಮಾಚಲ ಪ್ರದೇಶ ಸರ್ಕಾರ. ರಾಜ್ಯದ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು ಅಲ್ಲಿನ ವಿಧಾನಸಭೆಗೆ ತಿಳಿಸಿದ್ದಾರೆ.
ಈ ಬಗ್ಗೆ ಅಲ್ಲಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ ಮುಂದಿನ ಎರಡು ತಿಂಗಳು ಯಾವುದೇ ಸಂಬಳ, ಟಿಎ-ಡಿಎ ತೆಗೆದುಕೊಳ್ಳುವುದಿಲ್ಲ ಎಂದು ತಮ್ಮ ಸಂಪುಟದ ಎಲ್ಲ ಸದಸ್ಯರು ನಿರ್ಧಸಿರುವುದಾಗಿ ಸಿಎಂ ಸುಖ್ವಿಂದರ್ ಹೇಳಿದ್ದಾರೆ. ಈ ನಿರ್ಧಾರದಿಂದ ಕೇವಲ ಒಂದು ಸಣ್ಣ ಮೊತ್ತವಷ್ಟೆ. ಇದರ ಜೊತೆಗೆ ಎಲ್ಲ ರಾಜ್ಯದ ಶಾಸಕರು ಕೂಡ ಕೊಡುಗೆ ನೀಡಬೇಕು ಎಂದು ಕೋರಿಕೊಂಡಿದ್ದಾರೆ.

ಹಿಮಾಚಲ ಪ್ರದೇಶ ಸರ್ಕಾರದ ಅಸಮರ್ಪಕ ಆಡಳಿತವೇ ಈ ದುಸ್ಥಿತಿಗೆ ಕಾರಣ ಎಂದು ಹೇಳಲಾಗಿದ್ದು, ಹಳೆಯ ಪಿಂಚಣಿ ಯೋಜನೆ, ಮಹಿಳೆಯರಿಗೆ 1,500 ರೂಪಾಯಿ ನೀಡುವ ಗ್ಯಾರಂಟಿ ಯೋಜನೆ, ಉಚಿತ ವಿದ್ಯುತ್ ಯೋಜನೆಗಳಿಂದಾಗಿ ಸಾವಿರಾರು ಕೋಟಿ ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿಕೊಂಡಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದೇ ಮಾದರಿಯಲ್ಲಿ ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವುದು ಇದೀಗ ಸಂಕಷ್ಟಕ್ಕೆ ದೂಡಿದೆ. ಅಲ್ಲಿನ ಸರ್ಕಾರವು ಮಹಿಳೆಯರಿಗೆ 1,500 ರೂಪಾಯಿ ನೀಡುವ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಈ ಯೋಜನೆಗೆ ವಾರ್ಷಿಕ 800 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆಯಂತೆ.

ಅಲ್ಲದೆ ಹಳೆಯ ಪಿಂಚಣಿ ಯೋಜನೆ ಪುನರ್ ಆರಂಭವಾಗಿದ್ದರಿಂದಲೂ ಸರ್ಕಾರಕ್ಕೆ ವಾರ್ಷಿಕವಾಗಿ 1,000 ಕೋಟಿ ರೂಪಾಯಿ ಹೊರೆಯಾಗಿದೆ. ರಾಜ್ಯದಲ್ಲಿ 1,89,466 ಪಿಂಚಣಿದಾರರಿದ್ದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೊರೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕಳೆದ ವಿಧಾನಸಭೆಗೂ ಮುನ್ನ ರಾಜ್ಯ ಕಾಂಗ್ರೆಸ್ ಕೂಡ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿತ್ತು. ಅದರಂತೆ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಎನ್ನುವ ಐದು ಉಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇತ್ತೀಚೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಹಾಗಾಗಿ ಈ ಯೋಜನೆಗಳಿಂದಲೂ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಗೆ ಸಿಲುಕಲಿದೆ ಎಂದು ಟೀಕೆ ಮಾಡಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಗ್ಯಾರಂಟಿ ನೀಡುತ್ತಿದ್ದಾರೆ.












Click it and Unblock the Notifications