ಹಿಜಾಬ್ ವಿವಾದ: ರಾಷ್ಟ್ರ ಮಟ್ಟಕ್ಕೆ ಹರಡಬೇಡಿ ಎಂದ ಸುಪ್ರೀಂ
ನವದೆಹಲಿ, ಫೆಬ್ರವರಿ 11: ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಕಟ ಮಾಡಿದೆ. ಈ ನಡುವೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪ್ರಶ್ನೆ ಮಾಡಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ ತುರ್ತು ವಿಚಾರಣೆಗೆ ನಕಾರ ಎಂದ ಸುಪ್ರೀಂ ಕೋರ್ಟ್, "ಈ ವಿವಾದವನ್ನು ರಾಷ್ಟ್ರ ಮಟ್ಟಕ್ಕೆ ಹರಡಬೇಡಿ," ಎಂದು ಕಿವಿಮಾತು ಹೇಳಿದೆ.
"ಸೂಕ್ತ ಸಮಯದಲ್ಲಿ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ," ಎಂದು ಕೂಡಾ ಸುಪ್ರೀಂ ಕೋರ್ಟ್ ತಿಳಿಸಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ಧಾರ್ಮಿಕ ಉಡುಪು ಧರಿಸದಂತೆ ಹೈಕೋರ್ಟ್ ನಿನ್ನೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ. ಇಂದು ಆದೇಶವನ್ನು ಪ್ರಕಟ ಮಾಡಿದೆ. ಈ ಹಿನ್ನೆಲೆ ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.
ಈ ಅರ್ಜಿಯ ತುರ್ತು ವಿಚಾರಣೆಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, "ಈ ವಿಷಯಗಳನ್ನು ರಾಷ್ಟ್ರ ಮಟ್ಟಕ್ಕೆ ಹರಡಬೇಡಿ. ಸೂಕ್ತ ಸಮಯದಲ್ಲಿ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ," ಎಂದು ತಿಳಿಸಿದ್ದಾರೆ. ಪ್ರಕರಣವು "ದೂರಗಾಮಿ ಪರಿಣಾಮಗಳನ್ನು" ಹೊಂದಿದೆ ಮತ್ತು ವಿದ್ಯಾರ್ಥಿಗಳು 10 ವರ್ಷಗಳಿಂದ ಹಿಜಾಬ್ ಅಥವಾ ತಲೆಯ ಸ್ಕಾರ್ಫ್ ಅನ್ನು ಧರಿಸುತ್ತಿದ್ದಾರೆ ಎಂದು ವಾದಿಸಿದ ವಕೀಲರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಸುವುದಕ್ಕೆ ಸಮ್ಮತಿ ಸೂಚಿಸಿಲ್ಲ.

"ದಯವಿಟ್ಟು ಇದನ್ನು ದೊಡ್ಡ ಮಟ್ಟಕ್ಕೆ ಹರಡಬೇಡಿ. ಏನಾಗುತ್ತಿದೆ ಎಂದು ನಮಗೆ ತಿಳಿದಿದೆ. ಯೋಚಿಸಿ, ಈ ವಿಷಯಗಳನ್ನು ದೆಹಲಿಗೆ ತರುವುದು ಸರಿಯೇ? ರಾಷ್ಟ್ರ ಮಟ್ಟಕ್ಕೆ ತರುವುದು ಸರಿಯೇ?. ಏನಾದರೂ ತಪ್ಪಿದ್ದರೆ ನಾವು ರಕ್ಷಿಸುತ್ತೇವೆ," ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
"ಸದ್ಯಕ್ಕೆ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಬಹುದು. ಆದರೆ ಕ್ಯಾಂಪಸ್‌ನಲ್ಲಿ ಯಾವುದೇ ಧಾರ್ಮಿಕ ಉಡುಪುಗಳಿಲ್ಲದೆ ಶಾಲಾ-ಕಾಲೇಜಿಗಳಿಗೆ ಆಗಮಿಸಬೇಕು," ಎಂಬ ಹೈಕೋರ್ಟ್‌ನ ಆದೇಶವನ್ನು ಬಾಲಕಿಯ ಅರ್ಜಿಯು ಪ್ರಶ್ನಿಸಿದೆ. ತರಗತಿಯಲ್ಲಿ ಹಿಜಾಬ್ ನಿರ್ಬಂಧಗಳ ನಡುವೆ ಉಡುಪಿಯಲ್ಲಿ ಆರಂಭವಾದ ವಿವಾದ ರಾಷ್ಟ್ರಮಟ್ಟಕ್ಕೆ ಹರಡುತ್ತಿದ್ದಂತೆ ಸರ್ಕಾರವು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಬೇರೆ ಏನಿದೆ?
"ಪ್ರಾಯೋಗಿಕ ಪರೀಕ್ಷೆಗಳು ಫೆಬ್ರವರಿ 15 ರಂದು ಪ್ರಾರಂಭವಾಗುತ್ತವೆ. ಹಿಜಾಬ್ ನಿರ್ಬಂಧವಿದ್ದರೆ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ," ಎಂದು ವಿದ್ಯಾರ್ಥಿನಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಹೇಳಿದ್ದಾರೆ. ಹಾಗೆಯೇ "ಹಿಜಾಬ್ ಧರಿಸುವುದು ಸಾಂವಿಧಾನಿಕ ಅಭಿವ್ಯಕ್ತಿ ಹಕ್ಕು, ಗೌಪ್ಯತೆಯ ಹಕ್ಕು ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯ. ಆದ್ದರಿಂದ ಹೈಕೋರ್ಟ್ ಆದೇಶವು ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ವಾದ ಮಾಡಿದ್ದಾರೆ.
"ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿರುವ ಮುಸ್ಲಿಂ ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸುವ ಆದೇಶವನ್ನು ಸರಕಾರ ಹೊರಡಿಸಿದೆ. ಆಕ್ಷೇಪಾರ್ಹ ಆದೇಶವು ಮುಸ್ಲಿಮೇತರ ವಿದ್ಯಾರ್ಥಿನಿಯರು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ತಾರತಮ್ಯವನ್ನು ಮಾಡಿದೆ. ಆ ಮೂಲಕ ಸಂವಿಧಾನ ಉಲ್ಲಂಘನೆ ಮಾಡಲಾಗಿದೆ. ಭಾರತೀಯ ಸಂವಿಧಾನದ ಮೂಲಭೂತ ರಚನೆಯನ್ನು ರೂಪಿಸುವ ಸೆಕ್ಯುಲರಿಸಂ, ಭಾರತೀಯ ಸಂವಿಧಾನದ 14, 15, 19, 21 ಮತ್ತು 25 ನೇ ವಿಧಿಗಳನ್ನು ಈ ಆದೇಶವು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದೆ. ಭಾರತವು ಸಹಿ ಹಾಕಿರುವ ಅಂತಾರಾಷ್ಟ್ರೀಯ ಒಪ್ಪಂದಗಳ ಮೂಲ ತತ್ವಗಳನ್ನು ಉಲ್ಲಂಘಿಸುತ್ತದೆ," ಎಂದು ಸುಪ್ರೀಂ ಕೋರ್ಟ್‌ಗೆ ಆಕೆಯ ಮನವಿ ಹೇಳಿದೆ.
"ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆ," ಎಂದು ಕಳೆದ ವಾರ ಕರ್ನಾಟಕ ಸರ್ಕಾರವು ಹಿಜಾಬ್ ನಿಷೇಧಿಸಿದ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಫಾತಿಮಾ ಬುಶ್ರಾ ಸಲ್ಲಿಸಿದ ಮತ್ತೊಂದು ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿನ್ನೆ ನಿರಾಕರಿಸಿದೆ. "ಆಡಳಿತ ಸಮಿತಿಯು ಸಮವಸ್ತ್ರವನ್ನು ಆಯ್ಕೆ ಮಾಡದಿದ್ದಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಬಾರದು," ಎಂದು ಕರ್ನಾಟಕ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications