ಮುಡಾ ಕದನ; ಸಿದ್ದರಾಮಯ್ಯ ಬೆನ್ನಿಗೆ ನಿಂತ ಹೈಕಮಾಂಡ್
ನವದೆಹಲಿ, ಆಗಸ್ಟ್ 24: ರಾಜ್ಯ ರಾಜಕಾರಣದಲ್ಲಿ ಧಗಧಗಿಸ್ತಿರೋ ಜ್ವಾಲೆ. ಇದೀಗ ರಾಷ್ಟ್ರ ಮಟ್ಟದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಮುಡಾ ಕದನವನ್ನ ಗಂಭೀರವಾಗಿ ಪರಿಗಣಿಸಿರೋ ರಾಜ್ಯ ಕಾಂಗ್ರೆಸ್, ರಾಷ್ಟ್ರ ಮಟ್ಟದಲ್ಲೂ ರಾಜ್ಯಪಾಲರ ವಿರುದ್ಧ ಹೋರಾಡಲು ತೊಡೆ ತಟ್ಟಿ ನಿಂತಿದೆ.
ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸದ್ಯ ಹೈಕೋರ್ಟ್ ಸಿಎಂಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಮುಂದಿನ ವಿಚಾರಣೆಯನ್ನ ಆಗಸ್ಟ್ 29ಕ್ಕೆ ನಿಗದಿ ಪಡಿಸಿದೆ. ರಾಜ್ಯಪಾಲರ ನಡೆ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಹೋರಾಟಕ್ಕೆ ಹೈಕಮಾಂಡ್ ಬಲವೂ ಸಿಕ್ಕಿದೆ.

ಹೈಕಮಾಂಡ್ ನಾಯಕರ ಜೊತೆಗಿನ ಚರ್ಚೆ ಬಳಿಕ ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ನಾವು ನಿಮ್ಮ ಜೊತೆಗಿದ್ದೇವೆ ಧೈರ್ಯದಿಂದ ಹೋರಾಟ ಮಾಡಿ, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನಾಯಕರು ನಮಗೆ ಅಭಯ ಕೊಟ್ಟಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಜೊತೆಯಾಗಿ ನಿಂತಿವೆ. ಕರ್ನಾಟಕದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಿರುಕುಳ ನೀಡುತ್ತಿರುವ ಬಗ್ಗೆ ನಮ್ಮ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರೂ ಸಹ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ ಎಂದು ತಿಳಿಸಿದರು.
"ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ದೊಡ್ಡ ರಾಜ್ಯ ಕರ್ನಾಟಕ ಇದನ್ನು ಅಭದ್ರಗೊಳಿಸುವ ಪ್ರಯತ್ನಿಲಾಗುತ್ತಿದೆ. ಇಲ್ಲಿ ಕೇವಲ ಮುಖ್ಯಮಂತ್ರಿಗಳನ್ನ ಮಾತ್ರ ಗುರಿ ಮಾಡುತ್ತಿಲ್ಲ. ಬಡವರಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಗುರಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಆ. 29 ರ ನಂತರ ಪ್ರಾಸಿಕ್ಯೂಷನ್ ಗೆ ನೀಡಿರುವ ತಡೆಯಾಜ್ಞೆ ಕೊನೆಯಾಗಲಿದೆ ಆನಂತರ ಸರ್ಕಾರದ ನಡೆ ಹೇಗಿರಲಿದೆ ಎಂದು ಕೇಳಿದಾಗ "ನಮಗೆ ಕಾನೂನಿನ ಮೇಲೆ ಗೌರವವಿದೆ. ಪ್ರಾಸಿಕ್ಯೂಷನ್ ಗೆ ನೀಡಿರುವುದು ಅಸಂವಿಧಾನಿಕ. ಇದನ್ನು ರಾಜ್ಯಪಾಲರೇ ಮನದಟ್ಟು ಮಾಡಿಕೊಂಡು ವಾಪಾಸ್ ಪಡೆಯುವ ಕಾಲ ಬರಲಿದೆ ಎಂದು ತಿಳಿಸಿದರು.












Click it and Unblock the Notifications