
ರಾಯಪುರದಲ್ಲಿ ಹೆಲಿಕಾಪ್ಟರ್ ದುರಂತ: ಇಬ್ಬರು ಪೈಲಟ್‌ಗಳ ಸಾವು
ರಾಯಪುರ್, ಮೇ 13: ಹಾರಾಟ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಸರಕಾರಿ ಹೆಲಿಕಾಪ್ಟರ್‌ವೊಂದು ಅಪಘಾತಕ್ಕೊಳಗಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ದುರಂತ ಛತ್ತೀಸ್‌ಗಡ ರಾಜಧಾನಿಯಲ್ಲಿ ಗುರುವಾರ (ಮೇ 12) ರಾತ್ರಿ ಸಂಭವಿಸಿದೆ. ರಾಯಪುರ್‌ನ ಸ್ವಾಮಿ ವಿವೇಕಾನದ ವಿಮಾನ ನಿಲ್ದಾಣದಲ್ಲಿ ರಾತ್ರಿ 9:10ರ ಆಸುಪಾಸು ಸಮಯದಲ್ಲಿ ಈ ಘಟನೆಯಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರವಾಲ್ ಹೇಳಿದ್ದಾರೆ.
ಅಪಘಾತಕ್ಕೊಳಗಾದ ಹೆಲಿಕಾಪ್ಟರ್ ಅಗಸ್ಟಾ ಕಂಪನಿಯದ್ದಾಗಿದೆ. ಈ ದುರಂತಕ್ಕೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಮಾಮೂಲಿಯ ಹಾರಾಟ ಅಭ್ಯಾಸ ನಡೆಸುವಾಗ ಅಪಘಾತವಾಗಿದೆ. ಹೆಲಿಕಾಪ್ಟರ್ ಅನ್ನು ಕೆಳಗೆ ಇಳಿಸುವಾಗ ಬೆಂಕಿ ಹೊತ್ತುಕೊಂಡಿದೆ ಎಂಬ ಮಾಹಿತಿಯಷ್ಟೇ ಗೊತ್ತಾಗಿರುವುದು.
ಕಾಪ್ಟರ್‌ನಲ್ಲಿದ್ದು ಇಬ್ಬರು ಪೈಲಟ್‌ಗಳು ಗಂಭೀರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಸಮೀಪದ ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದರೆನ್ನಲಾಗಿದೆ. ಕ್ಯಾಪ್ಟನ್ ಗೋಪಾಲ್ ಕೃಷ್ಣ ಪಾಂಡ ಮತ್ತು ಕ್ಯಾಪ್ಟನ್ ಎ ಪಿ ಶ್ರೀವಾಸ್ತವ ಈ ಅಪಘಾತದಲ್ಲಿ ಸಾವನ್ನಪ್ಪಿದ ಪೈಲಟ್‌ಗಳಾಗಿದ್ದಾರೆ.
ದುರಂತ ಸಂಭವಿಸಿದಾಗ ಕಾಪ್ಟರ್‌ನಲ್ಲಿ ಈ ಇಬ್ಬರು ಪೈಲಟ್ ಮಾತ್ರವೇ ಇದ್ದದ್ದು. ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಇದೇ ಸಂದರ್ಭದಲ್ಲಿ ಪೈಲಟ್‌ಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

"ರಾಯಪುರದ ಏರ್‌ಪೋರ್ಟ್‌ನಲ್ಲಿ ರಾಜ್ಯದ ಹೆಲಿಕಾಪ್ಟರ್ ಅಪಘಾತವಾದ ನೋವಿನ ಸುದ್ದಿ ಬಂತು. ಈ ದುರಂತದಲ್ಲಿ ನಮ್ಮ ಇಬ್ಬರು ಪೈಲಟ್‌ಗಳಾದ ಕ್ಯಾಪ್ಟನ್ ಪಾಂಡಾ ಮತ್ತು ಕ್ಯಾಪ್ಟನ್ ಶ್ರೀವಾಸ್ತವ ಸಾವನ್ನಪ್ಪಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ.
ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ" ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ಹೆಲಿಕಾಪ್ಟರ್ ದುರಂತಕ್ಕೆ ಏನು ಕಾರಣ ಎಂದು ನಿಖರವಾಗಿ ಪತ್ತೆ ಮಾಡಲು ಛತ್ತೀಸ್‌ಗಡ ಸರಕಾರ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದ ತನಿಖೆ ನಡೆಯುತ್ತಿದೆ.
(ಒನ್ಇಂಡಿಯಾ ಸುದ್ದಿ)