ಹಿಮಾಲಯ ತಪ್ಪಲಿನಲ್ಲಿ ಭಾರೀ ಮಳೆ ಸಂಭವ
ನವದೆಹಲಿ, ಆಗಸ್ಟ್17: ಮುಂದಿನ ನಾಲ್ಕು ದಿನಗಳಲ್ಲಿ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು ಸಕಲ ರಕ್ಷಣಾ ಕ್ರಮ ತೆಗೆದುಕೊಳ್ಳಲಾಗಿದೆ.
ಆದರೆ ಈವರೆಗೂ ದೇಶದಾದ್ಯಂತ ಶೇಕಡ 10 ಮಳೆ ಕೊರತೆಯಾಗಿದೆ. ಮಳೆಗಾಲದ ಕೊನೆಯ ಎರಡು ತಿಂಗಳಿನಲ್ಲಿ ಶೇ 16ರಷ್ಟು ಮಳೆ ಕೊರತೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬೈನಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ.[ಮಳೆ ಮಾಡಿದ ಹಾನಿ ಚಿತ್ರಗಳಲ್ಲಿ ನೋಡಿ]

ಕಳೆದ ವಾರ ಆರ್ಭಟಿಸಿದ್ದ ಮಳೆರಾಯ ಒಂದು ವಾರದಿಂದ ಮಾಯವಾಗಿದ್ದ. ಜಮ್ಮು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಳೆ ತೀವ್ರ ಹಾನಿ ಮಾಡಿತ್ತು. ರಾಜಸ್ಥಾನ ಮತ್ತು ಗುಜರಾತ್ ನಲ್ಲೂ ಭಾರೀ ಮಳೆಯಾಗಿತ್ತು.
ರಾಜ್ಯದಲ್ಲಿ ಕೈಕೊಟ್ಟ ಮುಂಗಾರು?
ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ಹವಾಮಾನ ಇಲಾಖೆ ಹೇಳುವಂತೆ ಕರ್ನಾಟಕದಲ್ಲಿ ಶೇ 45 ರಷ್ಟು ಮಳೆ ಕೊರತೆಯಾಗಿದೆ. ಮಹಾರಾಷ್ಟ್ರದಲ್ಲಿ ಶೇ. 48ರಷ್ಟು, ಆಂಧ್ರಪ್ರದೇಶದಲ್ಲಿ ಶೇ. 36ರಷ್ಟು, ತೆಲಂಗಾಣದಲ್ಲಿ ಶೇ.23ರಷ್ಟು ಮಳೆ ಕೊರತೆಯಾಗಿದೆ.
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಉಷ್ಣಾಂಶ ಒಂದೇ ತೆರನಾಗಿರಲಿದ್ದು ಅಲ್ಲಲ್ಲಿ ತುಂತುರು ಮಳೆಯಾಗಲಿದೆ.












Click it and Unblock the Notifications