ತ್ರಿಪುರಾದಲ್ಲಿ ಶುಕ್ರವಾರದಿಂದ ಭಾರೀ ಮಳೆ, ನಿರಾಶ್ರಿತರ ಶಿಬಿರಗಳಲ್ಲಿ 700ಕ್ಕೂ ಹೆಚ್ಚು ಮಂದಿ
ಅಗರ್ತಲ (ತ್ರಿಪುರಾ), ಮೇ 26: ತ್ರಿಪುರಾದಲ್ಲಿ ಶುಕ್ರವಾರದಿಂದ ಭಾರೀ ಮಳೆ ಆಗುತ್ತಿದ್ದು, ಮನೆ ಕಳೆದುಕೊಂಡ ಏಳು ನೂರಕ್ಕೂ ಹೆಚ್ಚು ಮಂದಿ ರಾಜ್ಯದಾದ್ಯಂತ ಇರುವ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಯಾವುದೇ ಗಾಯ ಅಥವಾ ಸಾವು- ನೋವಿನ ಬಗ್ಗೆ ವರದಿ ಆಗಿಲ್ಲ.
ಉತ್ತರ ತ್ರಿಪುರಾ, ಉನಕೋಟಿ, ಧಲಾಯಿ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಶರತ್ ದಾಸ್ ತಿಳಿಸಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ವರದಿ ಪ್ರಕಾರ, ವಿವಿಧ ಶಿಬಿರಗಳಲ್ಲಿ ಏಳುನೂರಾ ಮೂವತ್ತೊಂಬತ್ತು ಮಂದಿ ಆಶ್ರಯ ಪಡೆದಿದ್ದಾರೆ. ಅದರಲ್ಲಿ ಉನಕೋಟಿಯ ಮುನ್ನೂರಾ ಐವತ್ತೆಂಟು ಹಾಗೂ ಉತ್ತರ ತ್ರಿಪುರಾದ ಮುನ್ನೂರಾ ಎಂಬತ್ತೊಂದು ಮಂದಿ ಇದ್ದಾರೆ.

ಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಮಳೆಯಿಂದ ತೊಂದರೆಗೆ ಒಳಗಾದ ಸ್ಥಳಗಳಿಂದ ಜನರನ್ನು ಸ್ಥಳಾಂತರ ಮಾಡಲು ನಲವತ್ತು ರಕ್ಷಣಾ ದೋಣಿಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ತ್ರಿಪುರಾ ರಾಜ್ಯ ರೈಫಲ್ಸ್ ಕೂಡ ಪರಿಹಾರ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದೆ.

ಭಾರಿ ಗಾಳಿಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಉನ್ನಕೋಟಿ ಜಿಲ್ಲೆಯಲ್ಲಿ ಮನು ನದಿಯು ಅಪಾಯ ಮಟ್ಟವನ್ನು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಹ ಭಾರೀ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.












Click it and Unblock the Notifications