Kerala Landslide: ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ವಯನಾಡಿಗೆ 2 ದಿನ ರೆಡ್ ಅಲರ್ಟ್
ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದು, ಪರಿಣಾಮ ಈವರೆಗೂ 160ಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿನ ರಣಭೀಕರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಹದಗಡುತ್ತಿದ್ದು, ಜನರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್ಮಿ ಪಡೆ ಸಮಸ್ಯೆಯಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿವೆ. ಹಾಗೆಯೇ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ರಣಭೀಕರ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೂ 164 ಜನರು ಬಲಿಯಾಗಿದ್ದರೆ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 500ಕ್ಕೂ ಅಧಿಕ ಮನೆಗಳು ನಾಶ ಆಗಿವೆ ಎಂದು ತಿಳಿದುಬಂದಿದೆ. ದೊಡ್ಡವರು ಹೇಳಿರುವಂತೆ ಒಮ್ಮ ಪ್ರಕೃತಿ ಮುನಿಸಿಕೊಂಡರೆ ಅದರಿಂದಾಗುವ ಅನಾಹುತಗಳನ್ನು ಯಾರಿಂದಲೂ ತಡೆಯಲು ಆಗಲ್ಲ ಎನ್ನುವುದಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಿದೆ.

ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಪಾತ್ರದಲ್ಲಿ ಬರುವ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಿಗೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ.
ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಾದ ವೆಸ್ಲಿ ಸೇತುವೆ, ಶಿವನಸಮುದ್ರ, ಭರಚುಕ್ಕಿ ಹಾಗೂ ಹೊಗೇನಕಲ್ ಜಲಪಾತ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ಆಗಸ್ಟ್ 2ರ ತನಕ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಕಾಳಜಿ ಕೇಂದ್ರಕ್ಕೆ ರವಾನೆ: ಇನ್ನು, 2 ಲಕ್ಷ ಕ್ಯೂಸೆಕ್ ಹೊರಹರಿವು ಉಂಟಾಗುವ ಸಾಧ್ಯತೆ ಹಿನ್ನೆಲೆ ಮತ್ತೆ ನದಿ ಪಾತ್ರದ ಗ್ರಾಮಗಳು ಪ್ರವಾಹ ಭೀತಿಯಲ್ಲಿ ಸಿಲುಕಿದೆ. ಕಬಿನಿ ಜಲಾಶಯದಿಂದ 80,000 ಕ್ಯೂಸೆಕ್, ಕೆಆರ್‌ಎಸ್ ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಆದ್ದರಿಂದ ತಾಲ್ಲೂಕಿನ ದಾಸನಪುರ, ಮುಳ್ಳೂರು, ಹಳೆ ಹಂಪಾಪುರ, ಹಳೆ ಅಣ್ಣಗಳ್ಳಿ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯ, ಗ್ರಾಮಗಳು ಮತ್ತೆ ಪ್ರವಾಹದಲ್ಲಿ ಸಿಲುಕಿದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನದಿ ಪಾತ್ರದ ಗ್ರಾಮಗಳ ಜನರು ಗ್ರಾಮಗಳನ್ನು ತೊರೆಯಬೇಕು ಎಂದು ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡುತ್ತಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರನ್ನು ಮನವಿ ಮಾಡಿದರೂ ಸಹ ಗ್ರಾಮದವರು ನಾವು ಗ್ರಾಮವನ್ನು ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ದಾಸನಪುರ ಗ್ರಾಮದ ಪ್ರತಿಯೊಂದು ಮನೆಮನೆಗೂ ಉಪವಿಭಾಗಕಾರಿ ಮಹೇಶ್ ನೇತೃತ್ವ ತಂಡ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸುತ್ತಿದ್ದಾರೆ. ಈಗಾಗಲೇ 10 ಮನೆಯವರನ್ನು ಮನವೊಲಿಸಿ ಎರಡು ಕಾರಿನಲ್ಲಿ 25ಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಕರೆತರಲಾಗಿದೆ.












Click it and Unblock the Notifications