Haryana BJP: ಪಲಿತಾಂಶದ ಬಳಿಕವೂ ಹೆಚ್ಚಾಯ್ತು ಬಿಜೆಪಿ ಬಲ, ಸಾವಿತ್ರಿ ಜಿಂದಾಲ್ ಒಪ್ಪಿಗೆ
ನವದೆಹಲಿ, ಅಕ್ಟೋಬರ್ 09: ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆ 2024ಯಲ್ಲಿ ಬಿಜೆಪಿ ಹ್ಯಾಟ್ರಿಕ್ ಭಾರಿಸಿದೆ. ನೆನ್ನೆ ಮಂಗಳವಾರ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಪಕ್ಷೇತರವಾಗಿ ನಿಂತು ಗೆದ್ದು ಬೀಗಿರುವ 73 ವರ್ಷ ಸಾವಿತ್ರಿ ಜಿಂದಾಲ್ ಅವರು, ಮರಳಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಕೇಂದ್ರ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇವರು ಸೇರಿ ಪಕ್ಷೇತರ ನಿಂತು ಗೆದ್ದ ಎಲ್ಲ ಮೂವರು ಕೇಸರಿ ಪಡೆ ಬೆಂಬಲಿಸುವುದು ಖಚಿತವಾಗಿದೆ.
ಹೌದು, ಹರಿಯಾಣದ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಭಾರತ ಅತ್ಯಂತ ಶ್ರೀಮಂತ ಮಹಿಳೆಯಾಗಿರುವ ಸಾವಿತ್ರಿ ಜಿಂದಾಲ್ ಅವರನ್ನು ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ತ್ರಿಪುರ ಮಾಜಿ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಅವರು ಭೇಟಿ ಮಾಡಿದ್ದಾರೆ.

ಹರಿಯಾಣದಲ್ಲಿ ಮೂರನೇ ಭಾರಿಗೆ ಬಿಜೆಪಿ ಅಧಿಕಾರ ಗದ್ದುಗೆ ಏರಿದೆ. ಇದರ ಬೆನ್ನಲ್ಲೆ ಬುಧವಾರ ಬೆಳಗ್ಗೆ ಒಟ್ಟು ಮೂರು ಪಕ್ಷೇತರ ಅಭ್ಯರ್ಥಿಗಳ ಪೈಕಿ ಇಬ್ಬರಿಂದ ಬೆಂಬಲ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದೀಗ ಸಾವಿತ್ರಿ ಜಿಂದಾಲ್ ಅವರನ್ನು ಸಂಪರ್ಕಿಸಿದೆ. ಸಾವಿತ್ರಿ ಜಿಂದಾಲ್ ಅವರು ಬಾಹ್ಯವಾಗಿ ಪಕ್ಷವನ್ನು ಬೆಂಬಲಿಸುವುದಾಗಿ ಭೇಟಿ ಮಾಡಲು ಬಂದಿದ್ದ ಬಿಜೆಪಿ ವರಿಷ್ಠರಿಗೆ ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಈ ಹಿಂದೆ ಹಿಸಾರ್ ಕ್ಷೇತ್ರದಿಂದಲೇ ಶಾಸಕರಾಗಿ ಸಾವಿತ್ರಿ ಜಿಂದಾಲ್ ಅವರು ಆಯ್ಕೆ ಯಾಗಿದ್ದರು. ಬದಲಾದ ಸನ್ನಿವೇಶದಲ್ಲಿ ಅವರು ಬಿಜೆಪಿ ಸೇರ್ಪಡೆ ಆಗಿದ್ದರು. ಅವರ ಪುತ್ರ ಸಹ ಬಿಜೆಪಿ ಯಲ್ಲಿ ಸಂಸದರಾಗಿದ್ದಾರೆ.
ಈ ಬಾರಿ ಜನರು ಹಾಗೂ ಆಪ್ತರ ಒತ್ತಾಯದ ಮೇರೆಗೆ ಅವರು ಹಿಸಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿ ಇವರನ್ನು ಬಿಟ್ಟು ಡಾ.ಕಮಲ್ ಗುಪ್ತಾ ಅವರಿಗೆ ಟಿಕೆಟ್ ನೀಡಲಾಯಿತು. ಇತ್ತ ಕಾಂಗ್ರೆಸ್ ಗೆ ಹೋಗಲು ಇವರು ತಯಾರಿರಲಿಲ್ಲ. ಹೀಗಾಗಿ ಪಕ್ಷೇತರವಾಗಿ ಕಣಕ್ಕಿಳಿದು ಗೆದ್ದು ತೋರಿಸಿದ್ದಾರೆ.
ಚುನಾವಣೆ ವೇಳೆ ಕಾಂಗ್ರೆಸ್ ಕೆಲವು ನಾಯಕರು ಸಾವಿತ್ರಿ ಜಿಂದಾಲ್ ಅವರು ಬಿಜೆಪಿ ಬಿ ಟೀಮ್ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಾವಿತ್ರಿ ಜಿಂದಾಲ್ ಅವರು ಈ ಆರೋಪ ಸುಳ್ಳು. ನನಗೆ ಕ್ಷೇತ್ರದ ಜನರು, ಜನರ ಅಭಿವೃದ್ಧಿ ಮುಖ್ಯ. ನಾನು ಪರವು ಅಲ್ಲ, ವಿರೋಧವು ಅಲ್ಲ ಎಂದಿದ್ದರು. ಅಲ್ಲದೇ ಬಿಜೆಪಿ ಪಕ್ಷ ಸೇರಲ್ಲ ಎಂದಿದ್ದ ಅವರು ಮಾತಿನಂತೆ ನಡೆದುಕೊಂಡಿದ್ದಾರೆ. ಆದರೆ ಅಭಿವೃದ್ಧಿ, ಕ್ಷೇತ್ರದ ಹಿತಾಸಕ್ತಿಯಿಂದ ಆಡಳಿತ ಪಕ್ಷ ಬಿಜೆಪಿಗೆ ಬಾಹ್ಯ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ.












Click it and Unblock the Notifications