Haryana Election: ರಾಜ್ಯದಲ್ಲಿ 1966ರಿಂದ ಬರೀ 87 ಮಹಿಳೆಯರು ಅಸೆಂಬ್ಲಿಗೆ ಆಯ್ಕೆ, ಈ ಬಾರಿಯ ಮಹಿಳಾ ಅಭ್ಯರ್ಥಿಗಳೆಷ್ಟು?
ನವದೆಹಲಿ, ಸೆಪ್ಟಂಬರ್ 23: ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಕಾವು ಏರಿಕೆ ಆಗಿದೆ. ಈಗಾಗಲೇ ಒಟ್ಟು 90 ಕ್ಷೇತ್ರಗಳಿಂದ 1031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಎಲ್ಲ ರಾಷ್ಟ್ರೀಯ ಪಕ್ಷಗಳಿಂದ ಒಟ್ಟು 51 ಮಹಿಳಾ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಮಹಿಳಾ ಅಭ್ಯರ್ಥಿಗಳು ಒಟ್ಟಾರೆ ಎಷ್ಟು ಮಂದಿ ಈವರೆಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ? ರಾಜ್ಯದಲ್ಲಿ ಮಹಿಳೆಯರ ರಾಜಕೀಯ ಇತಿಹಾಸ, ಅಂಕಿ ಸಂಖ್ಯೆ ಇಲ್ಲಿದೆ.
ಇತರ ರಾಜ್ಯಗಳ ಚುನಾವಣೆಯಂತೆ ಹರಿಯಾಣದಲ್ಲಿ ಸಹ ಪುರುಷ ಪ್ರಧಾನ ರಾಜಕೀಯ ಇದೆ ಎಂಬುದು ಗುಪ್ತ ವಿಷಯವೇನಲ್ಲ. ಈ ಬಾರಿ ಒಟ್ಟು 51 ಮಹಿಳಾ ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ. ಇದರಲ್ಲಿ ಬಹುತೇಕ ಮಹಿಳೆಯರು ರಾಜಕೀಯ ಕುಟುಂಬಗಳಿಂದ ಬಂದವರೇ ಆಗಿದ್ದಾರೆ. ಒಳ್ಳೆಯ ಸ್ಥಾನಮಾನದಲ್ಲಿರುವವರೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹರಿಯಾಣವು 1966ರಲ್ಲಿ ಪಂಜಾಬ್ ರಾಜ್ಯದಿಂದ ವಿಭಜನೆಗೊಂಡ ಬಳಿಕ ಅಂದಿನಿಂದ ಈವರೆಗೆ ಕೇವಲ 87 ಮಹಿಳೆಯರನ್ನು ವಿಧಾನಸಭೆಗೆ ಆಯ್ಕೆ ಮಾಡಿದೆ. ವಿಪರ್ಯಾಸವೆಂದರೆ ಈವರೆಗೆ ಒಬ್ಬರು ಮಹಿಳೆಗೂ ಹರಿಯಾಣ ಸಿಎಂ ಸ್ಥಾನ ಲಭಿಸಿಲ್ಲ.
ಕಾಂಗ್ರೆಸ್‌ನಿಂದ 12 ಮಹಿಳೆಯರು ಕಣಕ್ಕೆ, ಬೇರೆ ಪಕ್ಷಗಳ ವಿವರ
ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷವು ಹೆಚ್ಚಿನ ಮಹಿಳಾ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್‌ವೊಂಚದರಿಂದಲೇ 12 ಮಂದಿ ಸ್ಪರ್ಧಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಲೋಕದಳ (INLD) ಮತ್ತು ಬಹುಜನ ಸಮಾಜ ಪಕ್ಷ (BSP) ಮೈತ್ರಿಕೂಟದ ಒಟ್ಟು 11 ಮಹಿಳೆಯರು ಕಣಕ್ಕಿಳಿದಿದ್ದಾರೆ.
ಇನ್ನೂ ರಾಜ್ಯದಲ್ಲಿನ ಆಡಳಿತ ಪಕ್ಷ ಬಿಜೆಪಿ 10 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಹಾಗೂ ಆಜಾದ್ ಸಮಾಜ ಪಕ್ಷ (ASP) ಮೈತ್ರಿ 08 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಇನ್ನು AAP ತನ್ನ 90 ಸೀಟುಗಳಲ್ಲಿ 10 ಸೀಟುಗಳನ್ನು ಮಹಿಳೆಯರಿಗೆ ಬಿಟ್ಟು ಕೊಟ್ಟಿದೆ.
47 ಮಹಿಳೆಯರು ಶಾಸಕರಾಗಿ ಆಯ್ಕೆ
ಮೂಲಗಳ ಪ್ರಕಾರ, ಸುಮಾರು 24 ವರ್ಷಗಳಿಂದ (2000) ಈಚೆಗೆ ಹರಿಯಾಣ ವಿಧಾನಸಭೆಯಿಂದ ಕೇವಲ 47 ಮಹಿಳೆಯರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2023 ರಲ್ಲಿ ಪ್ರತಿ 1,000 ಗಂಡು ಮಕ್ಕಳಿಗೆ 916 ಹೆಣ್ಣುಮಕ್ಕಳ ಜನನದ ಅನುಪಾತ ಇಳಿಕೆಯಾಗಿದೆ.
ಈ ಹಿಂದಿನ 2019 ರ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 104 ಮಂದಿ ಮಹಿಳೆಯು ಅಖಾಡಕ್ಕಿಳಿದಿದ್ದರು. ಆದರೆ ಅದರಲ್ಲಿ ಕೇವಲ 09 ಮಂದಿ ಮಾತ್ರವೇ ವಿಧಾನಸಭೆ ಆಯ್ಕೆ ಆಗಿದ್ದರು. 2014 ರ ಚುನಾವಣೆಯಲ್ಲಿ 116ರಲ್ಲಿ 13 ಮಂದಿ ಸೀಟು ಗೆಲ್ಲುವ ಮೂಲಕ ಪಕ್ಷದ ಬಲವರ್ಧನೆಗೆ ಕಾರಣರಾದರು.
ಜೋರಾದ ಪ್ರಚಾರ ಭರಾಟೆ
ಸದ್ಯ ಹರಿಯಾಣದಲ್ಲಿ 90 ಸದಸ್ಯ ಬಲವಿದ್ದು, ಗೆಲುವಿಗೆ 46 ಸೀಟು ಪಡೆಯಬೇಕಿದೆ. ಹಾಲಿ ವಿಧಾನಸಭಾ ಚುನಾವಣೆಯು ಅಕ್ಟೋಬರ್ 5 ರಂದು ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಬಿಡುಗಡೆಯಾಗಲಿದೆ.
ಇತ್ತ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ನಿಂದ ಪ್ರಭಾವಿ ಮಹಿಳಾ ಅಭ್ಯರ್ಥಿಗಳ ಸಮೇತವಾಗಿ ನಾಯಕರು ಗೆಲುವಿಗಾಗಿ ತಂತ್ರಗಾರಿಕೆ ಹೆಣೆದಿದ್ದಾರೆ.ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ.












Click it and Unblock the Notifications