Vinesh Phogat: ಹರ್ಯಾಣ ಚುನಾವಣೆ, ವಿನೇಶ್ ಫೋಗಟ್‌ಗೆ ಸ್ಪರ್ಧಿಸುವ ಕ್ಷೇತ್ರ ಯಾವುದು?
ನವದೆಹಲಿ, ಸೆಪ್ಟೆಂಬರ್ 07: ಕಾಂಗ್ರೆಸ್ ಪಕ್ಷ ಸೇರಿದ್ದ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದೆ. ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಹರ್ಯಾಣ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದ್ದು, ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ.
ಶುಕ್ರವಾರ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಇದಕ್ಕೂ ಮೊದಲು ಅವರು ಭಾರತೀಯ ರೈಲ್ವೆಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಈಗ ಕಾಂಗ್ರೆಸ್ ಪಕ್ಷ ವಿನೇಶ್ ಫೋಗಟ್‌ಗೆ ಜೂಲಾನಾ ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್ ನೀಡಿದೆ.

ಹರ್ಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ 32 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿಯೇ ವಿನೇಶ್ ಫೋಗಟ್ ಹೆಸರು ಘೋಷಣೆ ಮಾಡಲಾಗಿದ್ದು, ಅವರಿಗೆ ಜೂಲಾನಾ ಕ್ಷೇತ್ರದಿಂದ ಕಣಕ್ಕಿಳಿಯಲು ಪಕ್ಷ ಅವಕಾಶವನ್ನು ನೀಡಿದೆ.
ಕೆಲವು ದಿನಗಳ ಹಿಂದೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಹರ್ಯಾಣ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಬಾರಿಯಾ ಇಬ್ಬರು ಸಹ ಪಕ್ಷ ಸೇರುವ ಕುರಿತು ಗುರುವಾರ ಅಂತಿಮ ಚಿತ್ರಣ ಲಭ್ಯವಾಗಲಿದೆ ಎಂದು ಹೇಳಿದ್ದರು. ಶುಕ್ರವಾರ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದರು.
ಕಳೆದ ವರ್ಷ ಬಿಜೆಪಿಯ ಮಾಜಿ ಸಂಸದ, ಭಾರತ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿತ್ತು. ಅವರ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಮುಂಚೂಣಿಯಲ್ಲಿದ್ದರು.
ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ: ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ್ದ ವಿನೇಶ್ ಫೋಗಟ್, "ನನ್ನ ದೇಶದ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ನಾವು ಕ್ರೀಡಾಪಟುಗಳಾಗಿ ದೌರ್ಜನ್ಯವನ್ನು ಗಮನಿಸಿದ್ದೇವೆ. ಈ ಪರಿಸ್ಥಿತಿ ಯಾವ ಕ್ರೀಡಾಪಟುವಿಗೂ ಸಹ ಬರುವುದು ಬೇಡ" ಎಂದು ಹೇಳಿದ್ದರು.
"ನಾವು ಪ್ರತಿಭಟನೆಯಲ್ಲಿ ಪಾಲ್ಗೊಂಡಾಗ ಬಿಜೆಪಿ ಐಟಿ ಸೆಲ್ ನಮ್ಮ ವಿರುದ್ಧ ಅಪಪ್ರಚಾರ ಮಾಡಿತ್ತು. ಆಗಲೇ ನಾವು ಕುಸ್ತಿಯಿಂದ ದೂರ ಸರಿಯಬೇಕಿತ್ತು. ನಾನು ಒಲಿಂಪಿಕ್ಸ್‌ಗೆ ಹೋಗುವುದಿಲ್ಲ ಎಂದು ಹೇಳಿದ್ದರೂ ಸಹ ಹೋಗಿ ಬಂದೆ" ಎಂದು ತಿಳಿಸಿದ್ದರು.
"ಕಷ್ಟದ ಸಮಯದಲ್ಲಿ ನಮ್ಮ ಜೊತೆ ಯಾರು ಇರುತ್ತಾರೆ ಎಂಬುದು ಅರಿವಾಗುತ್ತದೆ. ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತಿದ್ದವು. ಅಂತಹ ಸಮಯದಲ್ಲಿ ಜೊತೆಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಈ ಕುರಿತು ಮೊದಲ ಸುತ್ತಿನ ಮಾತುಕತೆ ನಡೆದಿದೆ. 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಎರಡೂ ಪಕ್ಷಗಳು ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿಯೂ ಸೀಟು ಹಂಚಿಕೆ ಮಾಡಿಕೊಂಡಿದ್ದವು. ಸೀಟು ಹಂಚಿಕೆಯ ಮಾತುಕತೆ ಅಂತಿಮಗೊಂಡ ಬಳಿಕ ಮೈತ್ರಿಯ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.












Click it and Unblock the Notifications