ಹರಿಯಾಣ, ಜಮ್ಮು-ಕಾಶ್ಮೀರ ಸೋಲು: ಕಾಂಗ್ರೆಸ್‌ ಜೊತೆಗಿನ ಮೈತ್ರಿ ಮೇಲೆ ಪರಿಣಾಮ

ನವದೆಹಲಿ, ಅಕ್ಟೋಬರ್ 09: ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಜೊತೆ ಮೈತ್ರಿ ಮಾಡಿಕೊಂಡರೂ ಸಹ ಪಕ್ಷ ನಿರೀಕ್ಷೆ ಮಾಡಿದಷ್ಟು ಬೆಂಬಲ ಸಿಕ್ಕಿಲ್ಲ. ಈ ಚುನಾವಣಾ ಫಲಿತಾಂಶ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಕಾಂಗ್ರೆಸ್ ಜೊತೆ ಇತರ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮುನ್ನ ಚಿಂತಿಸುವಂತೆ ಮಾಡಿದೆ.

90 ಸದಸ್ಯ ಬಲದ ಹರಿಯಾಣದ ಬಿಜೆಪಿ 48 ಸೀಟು, ಕಾಂಗ್ರೆಸ್ 37 ಸೀಟು ಗೆದ್ದಿದೆ. 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯಗಳಿಸಿವೆ. ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ ಎಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಎರಡಂಕಿ ಸೀಟುಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿದ್ದವು. ಆದರೆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ.

Haryana And Jammu Kashmir Result Raises Questions About Alliance With Congress

ನವೆಂಬರ್‌ನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದ ವಿರೋಧ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳು ಮೈತ್ರಿಕೂಟದಲ್ಲಿವೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಮೈತ್ರಿ ಮತ್ತು ಚುನಾವಣಾ ಫಲಿತಾಂಶ ಈಗ ಮೈತ್ರಿಕೂಟದ ಸೀಟು ಹಂಚಿಕೆ ಲೆಕ್ಕಾಚಾರ ಬದಲಾಗುವಂತೆ ಮಾಡಿದೆ.

ನಾಯಕತ್ವದ ಮೇಲೆ ಸವಾಲು: ಹರಿಯಾಣ ಚುನಾವಣೆಯ ಸೋಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಾಯಕತ್ವದ ಕುರಿತು ಪ್ರಶ್ನೆಗಳನ್ನು ಎತ್ತಿದೆ. 2018ರ ಬಳಿಕ ದೇಶದ ಉತ್ತರ ಭಾಗದಲ್ಲಿ ಕಾಂಗ್ರೆಸ್ ಗೆದ್ದಿರುವುದು ಹಿಮಾಚಲ ಪ್ರದೇಶದಲ್ಲಿ ಮಾತ್ರ. ಹರಿಯಾಣದ ಫಲಿತಾಂಶ ಪಂಜಾಬ್ ಮತ್ತು ದೆಹಲಿ ವಿಧಾನಸಭೆ ಚುನಾವಣೆ ಮೇಲೆಯೂ ಉಂಟಾಗಲಿದೆ ಎಂಬುದು ತಜ್ಞರ ವಿಶ್ಲೇಷಣೆಯಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟದ ಪ್ರಮುಖ ಪಕ್ಷ ಕಾಂಗ್ರೆಸ್. ಮೈತ್ರಿಕೂಟ 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನದಲ್ಲಿ ಜಯಗಳಿಸಿದೆ. ಆದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ ಬೇಕು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಬೇಡಿಕೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರ ಮಾದರಿ (ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಸ್ಥಾನ) ಫಲಿತಾಂಶದ ನಿರೀಕ್ಷೆಯಲ್ಲಿ ಉದ್ಧವ್ ಠಾಕ್ರೆ ಇದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ರಾಜ್ಯಸಭಾ ಸದಸ್ಯ ಪ್ರಿಯಾಂಕ ಚತುರ್ವೇಧಿ ಮಾತನಾಡಿ, "ಆಡಳಿತ ವಿರೋಧಿ ಅಲೆ ಇದ್ದರೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಸೋತಿದೆ. ಮೈತ್ರಿಪಕ್ಷಗಳು ಒಬ್ಬರ ಜೊತೆ ಒಬ್ಬರು ಮಾತನಾಡಬೇಕು ಮಾಧ್ಯಮಗಳ ಜೊತೆ ಅಲ್ಲ" ಎಂದು ಹೇಳುವ ಮೂಲಕ ಮಹಾರಾಷ್ಟ್ರ ರಾಜ್ಯದ ಸೀಟು ಹಂಚಿಕೆ ಬಗ್ಗೆ ಸಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್‌ನಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಜಾರ್ಖಂಡ್‌ ಮುಕ್ತಿ ಮೋರ್ಚಾದ ಜೊತೆ ಮೈತ್ರಿಯಲ್ಲಿದೆ. ರಾಜ್ಯದ ಚುನಾವಣೆ ಎದುರಾಗುತ್ತಿದ್ದು, ಪಕ್ಷದ ಪಾತ್ರ ಏನಾಗಲಿದೆ? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಹರಿಯಾಣದಲ್ಲಿ ಕಾಂಗ್ರೆಸ್‌ ಪಕ್ಷವೇ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿತ್ತು. ಆದರೆ ಎಎಪಿ ಅದನ್ನು ತಳ್ಳಿ ಹಾಕಿದ್ದು ಏಕೆ? ಎಂಬ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ.

ಹರಿಯಾಣದಲ್ಲಿ ಸೋಲಿಗೆ ಪಕ್ಷದ ನಾಯಕರ ನಡುವಿನ ಕುರ್ಚಿ ಕದನ ಮತ್ತು ಚುನಾವಣಾ ಪ್ರಚಾರದ ತಂತ್ರ ರೂಪಿಸುವಲ್ಲಿ ವಿಫಲವಾಗಿರುವುದು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಿಸಾನ್, ಜವಾನ್ ಮತ್ತು ಪೈಲ್ವಾನ್ ಎಂಬ ಮೂರು ಪ್ರಮುಖ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರವನ್ನು ಮಾಡಿತು.

ಜಾಟ್ ಸಮುದಾಯದ ಮೇಲೆ ಹೆಚ್ಚು ಅವಲಂಬಿತವಾದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವಲ್ಲಿ ವಿಫಲವಾಯಿತು. ಜಾಟ್ ಸಮುದಾಯದ ಇತರ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದ್ದರಿಂದ ರಾಜ್ಯದಲ್ಲಿ 3ನೇ ಬಾರಿಗೆ ಅಧಿಕಾರ ಸಿಕ್ಕಿದೆ. ಈಗ ಮುಂಬರುವ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಮುನ್ನ ಇತರ ಪಕ್ಷಗಳು ಹಲವು ಬಾರಿ ಚಿಂತಿಸಿ ಮುಂದಿನ ಹೆಜ್ಜೆ ಇಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+