Breaking: ಹನುಮಾನ್ ಚಾಲೀಸಾ ವಿವಾದ: ಸಂಸದೆ ನವನೀತ್, ಪತಿ ರವಿ ರಾಣಾಗೆ ಜಾಮೀನು
ಮುಂಬೈ, ಮೇ 4: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸದ ಬಳಿ ಹನುಮಾನ್ ಚಾಲೀಸ ಪಠಣ ಮಾಡಿದ ಕಾರಣಕ್ಕೆ ಬಂದಿತರಾಗಿದ್ದ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರಿಗೆ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಏಪ್ರಿಲ್ 23ರಂದು ಖಾರ್ ಠಾಣೆ ಪೊಲೀಸರು ರಾಣಾ ದಂಪತಿ ವಿರುದ್ಧ ರಾಜ್ಯದ್ರೋಹ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಮಾಜಿ ನಟಿ ನವನೀತ್ ಕೌರ್ ರಾಣಾ ಮತ್ತವರ ಪತಿಗೆ ಜಾಮೀನು ನೀಡಬಾರದು ಎಂದು ಸರಕಾರಿ ಪರ ವಕೀಲರು ಮಾಡಿಕೊಂಡ ಮನವಿಯನ್ನು ಸೆಷೆನ್ಸ್ ಕೋರ್ಟ್ ನ್ಯಾಯಾಧೀಶರು ತಿರಸ್ಕರಿಸಿದರು.
ರಾಣಾ ದಂಪತಿ ಏಪ್ರಿಲ್ 20 ಮತ್ತು 23ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ರೀತಿ ನೋಡಿದರೆ ಅವರು ವಾಕ್‌ಸ್ವಾತಂತ್ರ್ಯದ ಹದ್ದು ಮೀರಿರುವುದು ಸ್ಪಷ್ಟವಾಗುತ್ತದೆ. ರಾಜ್ಯ ಸರಕಾರದ ಬಗ್ಗೆ ದ್ವೇಷ ಮೂಡುವ ಉದ್ದೇಶ ಅವರ ಮಾತುಗಳಲ್ಲಿ ಅಡಕವಾಗಿದೆ. ಸಮಾಜದ ವಿವಿಧ ವರ್ಗಗಳ ಜನರ ಮಧ್ಯೆ ವೈಷಮ್ಯ ಬಿತ್ತುವ ಉದ್ದೇಶ ಇದೆ ಎಂದು ಪ್ರಾಸಿಕ್ಯೂಷನ್‌ನವರು ವಾದಿಸಿದ್ದರು.

ರವಿ ರಾಣಾ ವಿರುದ್ಧ ಈಗಾಗಲೇ 18 ಅಪರಾಧ ಪ್ರಕರಣಗಳು ದಾಖಲಾಗಿವೆ. ನವನೀತ್ ರಾಣಾ ವಿರುದ್ಧ 7 ಆರೋಪ ಪ್ರಕರಣಗಳಿವೆ ಎಂದು ವಾದಿಸಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘಾರತ್, "ಬಹಳ ಯೋಜಿತ ರೀತಿಯಲ್ಲಿ ರಾಣಾ ದಂಪತಿ ಹನುಮಾನ್ ಚಾಲೀಸ ವಿವಾದ ಸೃಷ್ಟಿಸಿದರು" ಎಂದು ಅಭಿಪ್ರಾಯಪಟ್ಟರು.

"ಮಾತೋಶ್ರೀ ನಿವಾಸದ ಬಳಿಕ ಶ್ರೀ ಹನುಮ ಚಾಲಿಸ ಪಠಣ ಮಾಡುವುದನ್ನು ವಿರೋಧಿಸಿದರೆ ಹಿಂದೂಗಳನ್ನ ರೊಚ್ಚಿಗೆಬ್ಬಿಸುತ್ತದೆ. ಪಠಣಕ್ಕೆ ಅನುಮತಿ ಕೊಟ್ಟರೆ ಈ ರಾಜ್ಯದಲ್ಲಿ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಪ್ರಾಧಾನ್ಯತೆ ಸಿಗುತ್ತದೆ ಎಂದು ಇತರ ಧರ್ಮೀಯರ ಭಾವನೆಗೆ ಧಕ್ಕೆ ತಂದಂತಾಗುತ್ತದೆ. ಇದು ರಾಣಾ ದಂಪತಿಯ ಪ್ಲಾನ್ ಆಗಿತ್ತು" ಎಂಬುದು ಪೊಲೀಸರು ಮಾಡಿರುವ ಶಂಕೆ.
ಏಪ್ರಿಲ್ 25ರಂದು ನವನೀತ್ ರಾಣಾ ಮತ್ತು ರವಿ ರಾಣಾ ತಮ್ಮ ವಕೀಲ ರಿಜ್ವಾನ್ ಮರ್ಚೆಂಟ್ ಮೂಲಕ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಹಾಕಿದರು. "ಹನುಮ ಚಾಲೀಸವನ್ನು ಪಠಣ ಮಾಡುವುದರ ಹಿಂದೆ ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶ ಇರಲಿಲ್ಲ. ಜನಪ್ರಿಯತೆಯಿಂದಾಗಿ ಹನುಮ ಚಾಲಿಸ ಪಠಣ ಮಾಡಿದೆವು" ಎಂದು ಈ ದಂಪತಿ ಹೇಳಿಕೆ ನೀಡಿದ್ದರು.
"ಸರಕಾರ ಎಲ್ಲದಕ್ಕೂ ತೀರಾ ಸೂಕ್ಷ್ಮತೆ ತೋರುತ್ತಿದೆ. ಟೀಕೆಗಳನ್ನ ಸ್ವೀಕರಿಸಲು ಅಸಮರ್ಥವಾಗಿದೆ. ಸಿಎಂ ನಿವಾಸದ ಹೊರತೆ ಹನುಮಾನ್ ಚಾಲೀಸ ಪಠಣ ಮಾಡಿದರೆ ಬೇರೆ ಸಮುದಾಯದ ಭಾವನೆಗೆ ಧಕ್ಕೆ ತಂದಂತಾಗುತ್ತದೆಂದು ಭಾವಿಸುವುದು ಯಾವ ರೀತಿಯಲ್ಲೂ ಸರಿಯಲ್ಲ" ಎಂದು ಕೋರ್ಟ್‌ಗೆ ಸಲ್ಲಿಸಿದ ಹೇಳಿಕೆಯಲ್ಲಿ ಈ ದಂಪತಿ ತಿಳಿಸಿದ್ದರು.
ನವನೀತ್ ರಾಣಾ ಮತ್ತು ರವಿ ರಾಣಾ ಅವರ ಈ ವಾದವನ್ನು ಪರಿಗಣಿಸಿ ಸೆಷೆನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಯಾರು ಈ ನವನೀತ್ ರಾಣಾ?
ಪಂಜಾಬ್ ಮೂಲದ ನವನೀತ್ ಕೌರ್ ಅವರು ರಾಜಕೀಯಕ್ಕೆ ಬರುವ ಮುನ್ನ ಚಿತ್ರರಂಗದಲ್ಲಿದ್ದವರು. ಕನ್ನಡದ 'ದರ್ಶನ್' ಸಿನಿಮಾ ಮೂಲಕ ಸಿನಿಮಾಗೆ ಪದಾರ್ಪಣೆ ಮಾಡಿದ ಅವರು ತೆಲುಗು ಭಾಷೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಮೇಲೆ ಅವರು ಚುನಾವಣೆಯಲ್ಲಿ ನಿಂತು ಸೋತರು. ಬಳಿಕ 2019ರಲ್ಲಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಬೆಂಬಲದೊಂದಿಗೆ ಗೆದ್ದಿದ್ದಾರೆ. ಅವರ ಪತಿ ರವಿ ರಾಣಾ ಅವರೂ ಇದೇ ಅಮರಾವತಿಯ ವಿಧಾನಸಭಾ ಕ್ಷೇತ್ರವೊಂದರಲ್ಲಿ ಎಂಎಲ್‌ಎ ಆಗಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications