ಹನುಮಾನ್ ಅಂಶ್ ಸಿನಿಮಾ ಎಫೆಕ್ಟ್: ನೀಮ್ ಕರೋಲಿ ಬಾಬಾ ಆಶ್ರಮ ಕೈಂಚಿ ಧಾಮಕ್ಕೆ ಹರಿದುಬಂದ ಭಕ್ತಸಾಗರ
ಉತ್ತರಾಖಂಡದ ಸುಂದರ ಕುಮಾವುನ್ ಬೆಟ್ಟಗಳ ಮಡಿಲಲ್ಲಿರುವ ಸುಪ್ರಸಿದ್ಧ ಆಧ್ಯಾತ್ಮಿಕ ತಾಣ ಕೈಂಚಿ ಧಾಮ ಇದೀಗ ಭಕ್ತರ ಅಚ್ಚುಮೆಚ್ಚಿನ ತಾಣವಾಗಿದೆ. ಮಹಾನ್ ಸಂತ, ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರು ಸ್ಥಾಪಿಸಿದ ಈ ಪವಿತ್ರ ಆಶ್ರಮಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಊಹಿಸಲಾಗದಷ್ಟು ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಇತ್ತೀಚೆಗೆ ಬಿಡುಗಡೆಯಾದ ಹನುಮಾನ್ ಅಂಶ್ ಸಿನಿಮಾ.
ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಈ ಚಲನಚಿತ್ರವು ಜನರ ಮೇಲೆ ಗಾಢವಾದ ಪ್ರಭಾವ ಬೀರಿದ್ದು, ಪರಿಣಾಮವಾಗಿ ಕೈಂಚಿ ಧಾಮದತ್ತ ಭಕ್ತಸಾಗರವೇ ಹರಿದು ಬರುತ್ತಿದೆ.

ಹನುಮಾನ್ ಅಂಶ್ ಸಿನಿಮಾದ ಪ್ರಭಾವ
ನೀಮ್ ಕರೋಲಿ ಬಾಬಾ ಅವರನ್ನ ಸಾಕ್ಷಾತ್ ಹನುಮಂತನ ಅವತಾರ ಎಂದೇ ಭಕ್ತರು ನಂಬುತ್ತಾರೆ. ಅವರ ಅದ್ಭುತ ಪವಾಡಗಳು, ಸರಳ ಜೀವನ ಮತ್ತು ಭಕ್ತರ ಮೇಲಿನ ಕರುಣೆಯನ್ನ ಹನುಮಾನ್ ಅಂಶ್ ಸಿನಿಮಾ ಅತ್ಯಂತ ಸುಂದರವಾಗಿ ತೆರೆಯ ಮೇಲೆ ತಂದಿದೆ. ಈ ಸಿನಿಮಾ ವೀಕ್ಷಿಸಿದ ಬಳಿಕ, ಬಾಬಾ ಅವರ ಬಗ್ಗೆ ತಿಳಿಯದವರೂ ಸಹ ಅವರ ಮಹಿಮೆಗೆ ಮಾರುಹೋಗಿದ್ದಾರೆ.
ಪರಿಣಾಮವಾಗಿ, ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ವಿದೇಶಗಳಿಂದಲೂ ಭಕ್ತರು ಬಾಬಾ ಅವರ ದರ್ಶನ ಪಡೆಯಲು ಮತ್ತು ಕೈಂಚಿ ಧಾಮದ ಪವಿತ್ರ ವಾತಾವರಣದಲ್ಲಿ ಧ್ಯಾನ ಮಾಡಲು ಆಗಮಿಸುತ್ತಿದ್ದಾರೆ. ಈ ಸಿನಿಮಾ ಬಾಬಾ ಅವರ ಮೇಲಿನ ಭಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೈಂಚಿ ಧಾಮ ನೈನಿತಾಲ್: ಪ್ರತಿದಿನ 35,000ಕ್ಕೂ ಹೆಚ್ಚು ಭಕ್ತರ ಭೇಟಿ
ಸಾಮಾನ್ಯ ದಿನಗಳಲ್ಲಿಯೇ ಕೈಂಚಿ ಧಾಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹಿಂದೆ ಪ್ರತಿದಿನ ಅಂದಾಜು 25,000ದಷ್ಟು ಭಕ್ತರು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಆದರೆ, 'ಹನುಮಾನ್ ಅಂಶ್' ಚಿತ್ರದ ಬಿಡುಗಡೆಯ ನಂತರ ಈ ಸಂಖ್ಯೆ ದಿಢೀರನೆ ಏರಿಕೆಯಾಗಿದೆ. ಪ್ರಸ್ತುತ ಪ್ರತಿದಿನ ಸುಮಾರು 35,000 ಕ್ಕೂ ಹೆಚ್ಚು ಜನರು ಬಾಬಾ ಅವರ ಆಶೀರ್ವಾದ ಪಡೆಯಲು ಆಗಮಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅದರಲ್ಲೂ ಶನಿವಾರ ಮತ್ತು ಭಾನುವಾರದಂತಹ ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಇಡೀ ಆಶ್ರಮದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದೆ. ನೈನಿತಾಲ್‌ನ ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮವೀಗ ಭಕ್ತಿ ಮತ್ತು ಜಯಘೋಷಗಳಿಂದ ಮಾರ್ಧನಿಸುತ್ತಿದೆ.
ಟ್ರಾಫಿಕ್ ಸಮಸ್ಯೆ ಮತ್ತು ಪರ್ಯಾಯ ಮಾರ್ಗದ ಚಿಂತನೆ
ಭಕ್ತರ ಸಂಖ್ಯೆಯಲ್ಲಿನ ಈ ಹಠಾತ್ ಏರಿಕೆಯು ನೈನಿತಾಲ್ ಜಿಲ್ಲಾಡಳಿತಕ್ಕೆ ಹೊಸ ಸವಾಲನ್ನ ಸೃಷ್ಟಿಸಿದೆ. ಕೈಂಚಿ ಧಾಮವು ಕುಮಾವುನ್ ಬೆಟ್ಟಗಳ ಮೇಲಿರುವುದರಿಂದ, ಅಲ್ಲಿಗೆ ತಲುಪುವ ರಸ್ತೆಗಳು ಕಿರಿದಾಗಿವೆ. ಸಾವಿರಾರು ವಾಹನಗಳು ಏಕಕಾಲದಲ್ಲಿ ಬೆಟ್ಟದ ರಸ್ತೆಯತ್ತ ಮುಖ ಮಾಡುತ್ತಿರುವುದರಿಂದ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಆಶ್ರಮಕ್ಕೆ ತೆರಳುವ ಮಾರ್ಗದುದ್ದಕ್ಕೂ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ವಾಹನ ದಟ್ಟಣೆಯನ್ನ ನಿಯಂತ್ರಿಸಲು ಮತ್ತು ಭಕ್ತರಿಗೆ ಸುಗಮ ಸಂಚಾರ ಒದಗಿಸಲು ನೈನಿತಾಲ್ ಆಡಳಿತವು ಗಂಭೀರವಾಗಿ ಚಿಂತನೆ ನಡೆಸಿದೆ. ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಕೈಂಚಿ ಧಾಮಕ್ಕೆ ತಲುಪಲು ಪರ್ಯಾಯ ಮಾರ್ಗವೊಂದನ್ನ ನಿರ್ಮಿಸುವ ಅಥವಾ ಅಸ್ತಿತ್ವದಲ್ಲಿರುವ ಬೇರೆ ರಸ್ತೆಗಳನ್ನ ಅಭಿವೃದ್ಧಿಪಡಿಸುವ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.


Click it and Unblock the Notifications
