ಸೋಮನಾಥ ದೇವಾಲಯ ಸಂದರ್ಶಕರ ಪುಸ್ತಕದಲ್ಲಿ ರಾಹುಲ್ ಏನು ಬರೆದ್ರು?
ಅಹಮದಾಬಾದ್, ನವೆಂಬರ್ 29: ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತಿನ ಐತಿಹಾಸಿಕ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮಗಳ ಗಮನ ಸೆಳೆದರು.
ಆದರೆ ಅದಕ್ಕಿಂತ ಹೆಚ್ಚು ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ ರಾಹುಲ್ ಹಾಕಿದ ಸಹಿ ವಿವಾದವನ್ನು ಹುಟ್ಟುಹಾಕಿತು.
ಬುಧವಾರ ಬೆಳಿಗ್ಗೆ ದೇವಸ್ಥಾನಕ್ಕೆ ರಾಹುಲ್ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜತೆ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದರು ರಾಹುಲ್ ಗಾಂಧಿ.
ದೇವಸ್ಥಾನದ ನಿಯಮಗಳ ಪ್ರಕಾರ ಹಿಂದೂಯೇತರರು ದೇವಸ್ಥಾನ ಪ್ರವೇಶಿಸುವ ಮುನ್ನ ನಾನ್ ಹಿಂದೂಗಳಿಗೆ ಮೀಸಲಾದ ಪುಸ್ತಕದಲ್ಲಿ ಹೆಸರು ನಮೂದಿಸಬೇಕು.
|
ಬಹಿರಂಗ ಘೋಷಣೆ?
ಅದರಂತೆ ರಾಹುಲ್ ಗಾಂಧಿ ದೇವಸ್ಥಾನ ಪ್ರವೇಶಕ್ಕೆ ಆಡಳಿತ ಮಂಡಳಿಯಿಂದ ಒಪ್ಪಿಗೆ ಪಡೆದು ನಾನ್ ಹಿಂದೂಯೇತರರ ಪುಸ್ತಕದಲ್ಲಿ ಹೆಸರು ನಮೂದಿಸಿ ನಂತರ ದೇವಸ್ಥಾನದೊಳಕ್ಕೆ ಪ್ರವೇಶಿಸಿದರು. ಈ ಮೂಲಕ ತಾವು ಹಿಂದೂ ಅಲ್ಲ ಎಂಬುದನ್ನು ಸ್ವತಃ ರಾಹುಲ್ ಗಾಂಧಿ ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರ ಮಾಧ್ಯಮ ಸಹಾಯಕರಾದ ಮನೋಜ್ ತ್ಯಾಗಿ ಅಹ್ಮದ್ ಪಟೇಲ್ ಹೆಸರಿನ ಜತೆ ರಾಹುಲ್ ಗಾಂಧಿಯವರ ಹೆಸರನ್ನೂ ಹಿಂದೂಯೇತರ ಸಂದರ್ಶಕರ ಪುಸ್ತಕದಲ್ಲಿ ನಮೂದಿಸಿದ್ದಾರೆ.
|
ಕಾಂಗ್ರೆಸ್ ಸ್ಪಷ್ಟನೆ
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ, "ದೇವಸ್ಥಾನದಲ್ಲಿ ಒಂದೇ ಒಂದು ಸಂದರ್ಶಕರ ಪುಸ್ತಕವಿದ್ದು ಅದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹಿ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇತರ ಚಿತ್ರಗಳು ತಿರುಚಿದ್ದಾಗಿವೆ," ಎಂದು ಟ್ವೀಟ್ ಮಾಡಿದೆ.
"ಹತಾಶೆಯು ಹತಾಶೆಯ ಕ್ರಮಗಳಿಗೆ ಮುನ್ನುಡಿಯಾಗುತ್ತದೆಯೇ?" ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಬಿಜೆಪಿಯನ್ನು ಕೆಣಕಿದೆ.
ಟ್ವೀಟ್ ನಲ್ಲಿ ಚಿತ್ರವೂ ಇದ್ದು ಅದರಲ್ಲಿ, "ರಾಹುಲ್ ಗಾಂಧಿ, 10 ಜನಪಥ್ ಲೈನ್, ನವದೆಹಲಿ" ಎಂದು ಬರೆದು ರಾಹುಲ್ ಗಾಂಧಿ ಸಹಿ ಹಾಕಿದ್ದು ಕಾಣಿಸುತ್ತಿದೆ.

ಮೋದಿ ಟೀಕೆ
ಇನ್ನೊಂದೆಡೆ ಸೋಮನಾಥ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದನ್ನು ನರೇಂದ್ರ ಮೋದಿ ಟೀಕಿಸಿದ್ದಾರೆ. "ಇವತ್ತು ನೀವು ಸೋಮನಾಥ ದೇವರನ್ನು ಸ್ಮರಿಸುತ್ತಿದ್ದೀರಿ. ನಿಮಗೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ನಿಮಗೆ ಇತಿಹಾಸದ ಬಗ್ಗೆ ಅರಿವಿದೆಯಾ? ನಿಮ್ಮ ಅಜ್ಜಿಯ ತಂದೆ ಪಂಡಿತ್ ನೆಹರೂ ಸೋಮನಾಥ ದೇವಾಲಯದ ಮರು ನಿರ್ಮಾಣವನ್ನು ವಿರೋಧಿಸಿದ್ದರು," ಎಂದು ಮೋದಿ ಹೇಳಿದ್ದಾರೆ.

ದೇವಾಲಯ ಪ್ರವೇಶದಿಂದ ಪ್ರಚಾರ ಆರಂಭ
ತಮ್ಮ ಎರಡು ದಿನಗಳ ಗುಜರಾತ್ ಪ್ರವಾಸ ಆರಂಭಿಸುವ ಮುನ್ನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಐತಿಹಾಸಿಕ ಸೋಮನಾಥ ದೇವಾಲಯಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಂತರ ಚುನಾವಣಾ ಪ್ರಚಾರಕ್ಕೆ ತೆರಳಿದ ರಾಹುಲ್ ಗಾಂಧಿ ಗಿರ್ ಸೋಮನಾಥ್, ವಿಸಾವಡರ್, ಸವರ್ ಕುಂಡ್ಲಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಮತದಾನ ನಡೆಯಲಿದೆ. 18ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications